ಮಡಿಕೇರಿ ಜ.17 : ರಾಜಕೀಯ ಪಕ್ಷಗಳು ಹಾಗೂ ಚುನಾವಣಾ ಅಭ್ಯರ್ಥಿಗಳು ಚುನಾವಣಾ ನೀತಿ ಸಂಹಿತೆ ಸಂದರ್ಭದಲ್ಲಿ ಚುನಾವಣಾ ಪ್ರಚಾರಕ್ಕೆ ಬಳಸುವ ಸಾಮಾಗ್ರಿಗಳಿಗೆ ಮಾರುಕಟ್ಟೆ ದರ ನಿಗದಿ ಸಂಬಂಧ ರಾಜಕೀಯ ಪಕ್ಷಗಳ ಪ್ರಮುಖರೊಂದಿಗೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸಭೆ, ಸಮಾರಂಭಕ್ಕೆ ಬಳಸುವ ಫೆಂಡಾಲ್, ಚೇರ್, ಶಾಮಿಯಾನ, ಹ್ಯಾಂಡ್ ಬಿಲ್, ಪೋಸ್ಟರ್, ಜಾಹೀರಾತು, ಫಲಕಗಳು, ವಿಡಿಯೋ, ಆಡಿಯೋ ಪ್ರಚಾರ ಮತ್ತಿತರ ವೆಚ್ಚಪಟ್ಟಿ ಸಂಬಂಧಿಸಿದಂತೆ ಚರ್ಚೆ ನಡೆಯಿತು.
ಒಬ್ಬ ಅಭ್ಯರ್ಥಿ ರೂ.40 ಲಕ್ಷ ವರೆಗೆ ವೆಚ್ಚ ಮಾಡಬಹುದಾಗಿದ್ದು, ಚುನಾವಣಾ ಸಂದರ್ಭದಲ್ಲಿ ವೆಚ್ಚ ವೀಕ್ಷಕರಿಗೆ ಮಾಹಿತಿ ನೀಡಬೇಕಿದೆ. ಆ ನಿಟ್ಟಿನಲ್ಲಿ ಈಗಾಗಲೇ ನೀಡಲಾಗಿರುವ ಪಟ್ಟಿ ಸಂಬಂಧಿಸಿದಂತೆ ಪರಿಶೀಲಿಸಿ ತಿದ್ದುಪಡಿ ಇದ್ದಲ್ಲಿ ತಿಳಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಕಳೆದ ವಿಧಾನಸಭೆ ಮತ್ತು ಲೋಕಸಭಾ ಚುನಾವಣಾ ಸಂದರ್ಭದಲ್ಲಿನ ವೆಚ್ಚಪಟ್ಟಿ, ಹಾಗೆಯೇ ಹತ್ತಿರದ ಜಿಲ್ಲೆಗಳಲ್ಲಿ ವೆಚ್ಚಪಟ್ಟಿ ಯಾವ ರೀತಿ ಇದೆ ಎಂದು ಪರಿಶೀಲಿಸಿ ಮಾಹಿತಿ ನೀಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಭಾರತೀಯ ಜನತಾ ಪಕ್ಷದ ಅಪ್ಪಣ್ಣ ಅವರು ಅವರೆಗುಂದ ಮತ್ತಿತರ ಕಡೆಗಳಲ್ಲಿ ಮತದಾರರ ಗುರುತಿನ ಚೀಟಿ ಇನ್ನೂ ದೊರೆತಿಲ್ಲ ಎಂದು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರು.
`ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಜಿಲ್ಲೆಯಲ್ಲಿರುವ 256 ಹಾಡಿಗಳಿಗೆ ಎರಡು ಬಾರಿ ಭೇಟಿ ನೀಡಿ 3 ಸಾವಿರಕ್ಕೂ ಹೆಚ್ಚು ಮಂದಿಯನ್ನು ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲಾಗಿದೆ. ಜೇನುಕುರುಬ, ಬೆಟ್ಟಕುರುಬ, ಕಾಡುಕುರುಬ, ಸೋಲಿಗ, ಯರವ, ಕುಡಿಯ, ಮಲೆಕುಡಿಯ ಹೀಗೆ ಹಲವು ಗಿರಿಜನ ಕುಟುಂಬದವರನ್ನು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಪ್ರಯತ್ನಿಸಲಾಗಿದೆ. ಇದೊಂದು ನಿರಂತರ ಪ್ರಕ್ರಿಯೆಯಾಗಿದೆ. ಮತದಾರರ ಪಟ್ಟಿಗೆ ಹೆಸರು ಸೇರಿಸದಿರುವವರು ಸೇರ್ಪಡೆ ಮಾಡುವಂತಾಗಬೇಕು. ಆ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತದೊಂದಿಗೆ ರಾಜಕೀಯ ಪಕ್ಷಗಳು ಕೈಜೋಡಿಸಬೇಕು ಎಂದರು.’
ಸಿಪಿಐಎಂನ ಜಿಲ್ಲಾ ಕಾರ್ಯದರ್ಶಿ ರಮೇಶ್ ಅವರು ನಮ್ಮ ಪಕ್ಷದವರು ಸ್ಪರ್ಧೆ ಮಾಡದಿದ್ದರೂ ಸಹ, ನಮ್ಮ ಪಕ್ಷದ ನಿಲುವಿಗೆ ಹತ್ತಿರ ಇರುವವರಿಗೆ ಬೆಂಬಲ ನೀಡಿ, ಪ್ರಚಾರ ಮಾಡಲು ಅವಕಾಶ ಮಾಡಬೇಕು ಎಂದು ಕೋರಿದರು.
ಕಾಂಗ್ರೆಸ್ ಪಕ್ಷದ ತೆನ್ನಿರಾ ಮೈನಾ ಅವರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಸೇರಿದಂತೆ ಈಗಾಗಲೇ ನೀಡಲಾಗಿರುವ ಚುನಾವಣಾ ವೆಚ್ಚಪಟ್ಟಿ ಸಂಬಂಧಿಸಿದಂತೆ ಪರಿಶೀಲಿಸಿ ಮಾಹಿತಿ ನೀಡಲಾಗುವುದು ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಶಿರಸ್ತೆದಾರ್ ಪ್ರಕಾಶ್, ಅನಿಲ್ ಕುಮಾರ್ ಹಾಜರಿದ್ದರು.