ಮಡಿಕೇರಿ ಜ.20 : ಆಧುನಿಕ ಮೊಬೈಲ್ ಯುಗದಲ್ಲಿ ಮೊಬೈಲ್, ಟಿವಿ ಜೊತೆಗೆ ಪ್ರಾಚೀನ ಜಾನಪದ ಮತ್ತು ಬುಡಕಟ್ಟು ಕಲೆ ಹಾಗೂ ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವಂತಾಗಬೇಕು ಎಂದು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಕರೆ ನೀಡಿದ್ದಾರೆ.
ಕಾಲೇಜು ಶಿಕ್ಷಣ ಇಲಾಖೆ, ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಐನ್‍ಮನೆ ಕೆಫೆ ಸಹಕಾರದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಜಾನಪದ/ ಬುಡಕಟ್ಟು ನೃತ್ಯ ಸ್ಪರ್ಧಾ ಕಾರ್ಯಕ್ರಮಕ್ಕೆ ‘ದುಡಿ’ ಬಾರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಸ್ತುತ ದಿನದಲ್ಲಿ ಮೊಬೈಲ್ ಇಲ್ಲದೆ ಬದುಕುವುದು ಕಷ್ಟಸಾಧ್ಯ ಎಂಬಂತಾಗಿದೆ. ಆದರೂ ಎಷ್ಟು ಬೇಕು ಅಷ್ಟನ್ನು ಬಳಸಿಕೊಂಡು, ಹಿಂದಿನ ಕಲೆ, ಜಾನಪದ ಸಂಸ್ಕೃತಿಗೂ ಒತ್ತು ನೀಡುವಂತಾಗಬೇಕು ಎಂದು ಶಾಸಕರು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಅಂಕಿ ಅಂಶಗಳನ್ನು ಕ್ಯಾಲಿಕ್ಯೂಲೇಟರ್ ಬಳಸಿ ಉತ್ತರಿಸುತ್ತೇವೆ. ಆದರೆ ಹಿಂದೆ ಮಗ್ಗಿ/ ಕೈ ಬೆರಳಿನ ಮೂಲಕ ಅಂಕಿ ಅಂಶಗಳ ಮಾಹಿತಿಯನ್ನು ನೀಡುತ್ತಿದ್ದರು ಎಂದರು.
ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ಬದುಕುವಂತಾಗಬೇಕು. ವಿದ್ಯೆ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಪಾಲ್ಗೊಳ್ಳುವಂತಾಗಬೇಕು. ವೃತ್ತಿ ಕೌಶಲತೆ ಹೆಚ್ಚಿಸಿಕೊಳ್ಳಬೇಕು. ಮಾಹಿತಿ ತಂತ್ರಜ್ಞಾನ ಯುಗದಲ್ಲಿ ವಿಫುಲ ಅವಕಾಶಗಳಿದ್ದು, ಅವುಗಳನ್ನು ಬಳಸಿಕೊಳ್ಳಬೇಕು. ಮಾನವರಾಗಿ ಬದುಕಬೇಕು ಎಂದು ಶಾಸಕರು ಸಲಹೆ ಮಾಡಿದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರಾದ ಬಿದ್ದಾಟಂಡ ಎಸ್.ತಮ್ಮಯ್ಯ ಅವರು ಮಾತನಾಡಿ ಕೊಡಗು ಜಿಲ್ಲೆ ಪ್ರಾಚೀನ ಸಾಂಸ್ಕೃತಿಕ ಹಿನ್ನೆಲೆಯನ್ನು ಹೊಂದಿದ್ದು, ಇಲ್ಲಿನ ಕಲೆ, ಸಂಸ್ಕೃತಿ, ಜಾನಪದ ಉಳಿಸಿ ಬೆಳೆಸುವಂತಾಗಬೇಕು ಎಂದು ಹೇಳಿದರು.
ಕೊಡವ ಉಮ್ಮತ್ತಾಟ್, ಬೊಳಕಾಟ್, ಕೋಲಾಟ್, ಕತ್ತಿಯಾಟ್, ಕವಿಗೋಷ್ಠಿ, ಜಾನಪದ ನೃತ್ಯಗಳು ಹೀಗೆ ಹಲವು ಪ್ರಾಚೀನ ಸಂಸ್ಕೃತಿ, ಕಲೆಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಅಕಾಡೆಮಿ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಪ್ರಯತ್ನಿಸಲಾಗಿದೆ ಎಂದರು.
ಕೊಡಗಿನ ಉದ್ದಗಲಕ್ಕೂ 52 ಕ್ಕೂ ಹೆಚ್ಚು ಜಾನಪದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿ, ಪ್ರಾಚೀನ ಜಾನಪದ ಮತ್ತು ಬುಡಕಟ್ಟು ಸಂಸ್ಕೃತಿಯನ್ನು ಪಸರಿಸುವಲ್ಲಿ ಶ್ರಮಿಸಲಾಗಿದೆ ಎಂದು ಬಿ.ಎಸ್.ತಮ್ಮಯ್ಯ ಅವರು ನುಡಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ನಿರ್ಮಲ ಅವರು ಮಾತನಾಡಿದರು. ಐನ್‍ಮನೆ ಕೆಫೆಯ ಮಾಲೀಕರಾದ ತಮ್ಮು ಪೂವಯ್ಯ, ತೀರ್ಪುಗಾರರಾದ ಪೂರ್ಣಿಮಾ, ಮೇಘ, ಅನಿಲ್ ಕುಮಾರ್, ಇತರರು ಇದ್ದರು.
ಜಾನಪದ ಹಾಗೂ ಬುಡಕಟ್ಟು ನೃತ್ಯ ಸ್ಪರ್ಧಾ ಕಾರ್ಯಕ್ರಮದಲ್ಲಿ ಕೊಡಗು, ದಕ್ಷಿಣ ಕನ್ನಡ, ಮೈಸೂರು ಜಿಲ್ಲೆಯ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪ್ರಾಧ್ಯಾಪಕರಾದ ಕುಸುಮ ನಿರೂಪಿಸಿದರು. ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿವಕುಮಾರ್ ವಂದಿಸಿದರು.