ಮಡಿಕೇರಿ ಜ.21 : ಮದೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಜ.26 ರಂದು ಗಣರಾಜ್ಯೋತ್ಸವ ದಿನಾಚರಣೆ ಹಾಗೂ ಯೋಧ ವಂದನಾ ಕಾರ್ಯಕ್ರಮ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಧನಂಜಯ ಅಗೋಳಿಕಜೆ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮದೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಅಂದು ಬೆಳಗ್ಗೆ 9 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚು ಹಾಲಿ ಹಾಗೂ ಮಾಜಿ ಸೈನಿಕರನ್ನು ಸನ್ಮಾನಿಸಿ ಗೌರವಿಸಲಾಗುವುದು, ಹಾಲಿ ಸೈನಿಕರು ಸೇವೆಯಲ್ಲಿದ್ದರೆ ಅವರ ಕುಟುಂಬದ ಸದಸ್ಯರನ್ನು ಸನ್ಮಾನಿಸಲಾಗುವುದು ಎಂದು ಹೇಳಿದ್ದಾರೆ.
ಭಾರತ ದೇಶ ಇಂದು ಬಲಿಷ್ಠ ಮತ್ತು ಸುರಕ್ಷಿತವಾಗಿರಲು ಗಡಿ ಕಾಯುವ ಯೋಧರೇ ಕಾರಣಕರ್ತರಾಗಿದ್ದಾರೆ, ಇವರನ್ನು ಗೌರವಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ಕಾರಣದಿಂದ ವಿನೂತನ ಪ್ರಯತ್ನವಾಗಿ ಮದೆ ಸಹಕಾರ ಸಂಘದ ವ್ಯಾಪ್ತಿಗೆ ಒಳಪಡುವ ನಾಲ್ಕು ಗ್ರಾಮಗಳಲ್ಲಿರುವ 150 ಕ್ಕೂ ಹೆಚ್ಚು ಸೈನಿಕರನ್ನು ಗುರುತಿಸಿ ಸನ್ಮಾನಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ತಮ್ಮ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ಸಭಾ ಕಾರ್ಯಕ್ರಮವನ್ನು ವಿಧಾನ ಪರಿಷತ್ತಿನ ಮಾಜಿ ಶಾಸಕರು ಹಾಗೂ ನಿವೃತ್ತ ಸೇನಾಧಿಕಾರಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಉದ್ಘಾಟಿಸಲಿದ್ದಾರೆ. ಮೈಸೂರಿನ ಉಪನ್ಯಾಸಕ ಪಟ್ಟಡ ಶಿವಕುಮಾರ್ ವಂದನಾ ಭಾಷಣ ಮಾಡಲಿದ್ದಾರೆ. ಮದೆ ಗ್ರಾಮದ ನಿವೃತ್ತ ಸೇನಾಧಿಕಾರಿ, ಕ್ಯಾಪ್ಟನ್ ಹುಲಿಮನೆ ಡಿ.ಹರೀಶ್‍ಕುಮಾರ್ ಹಾಗೂ ಮದೆ ಗ್ರಾ.ಪಂ ಅಧ್ಯಕ್ಷ ನಡುಗಲ್ಲು ಪಿ.ರಾಮಯ್ಯ ಉಪಸ್ಥಿತರಿರುವರು ಎಂದು ಧನಂಜಯ ಅಗೋಳಿಕಜೆ ಮಾಹಿತಿ ನೀಡಿದ್ದಾರೆ.









