ಮಡಿಕೇರಿ ಜ.23 : ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕುಶಾಲನಗರ ರೈತ ಸಮುದಾಯ ಭವನದಲ್ಲಿ ಫೆ.3 ರಂದು ಆಯೋಜಿಸಿರುವ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವು ಪ್ರತಿಯೊಬ್ಬರ ಮನೆ ಮನೆಗಳ ಹಬ್ಬದ ಮಾದರಿಯಲ್ಲಿ ನುಡಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರೂ ಆಗಿರುವ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಕರೆ ನೀಡಿದರು.
ಕುಶಾಲನಗರದ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಕಛೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಹೊಸ ತಾಲ್ಲೂಕಿನಲ್ಲಿ ನಡೆಯುತ್ತಿರುವ ಪ್ರಥಮ ಸಾಹಿತ್ಯ ಸಮ್ಮೇಳನವನ್ನು ಶಿಸ್ತುಬದ್ಧವಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸುವ ಸಂಬAಧ ಈಗಾಗಲೇ ರಚಿಸಿರುವ ಉಪ ಸಮಿತಿಗಳ ಪದಾಧಿಕಾರಿಗಳು ಅಗತ್ಯವಿರುವ ಎಲ್ಲಾ ಸಿದ್ದತೆಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ತಾಲ್ಲೂಕಿನಾದ್ಯಂತ ಇರುವ ಸಾಹಿತ್ಯಾಸಕ್ತರು, ಸಂಘ ಸಂಸ್ಥೆಗಳ ಪ್ರಮುಖರು ಸಮ್ಮೇಳನದ ಯಶಸ್ಸಿಗೆ ಸಹಕರಿಸಬೇಕೆಂದು ಶಾಸಕ ರಂಜನ್ ಮನವಿ ಮಾಡಿದರು.
ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ ಮಾತನಾಡಿ ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಕೈಗೊಳ್ಳಬೇಕಿರುವ ಸಮ್ಮೇಳನದ ಸಿದ್ಧತೆಗಳ ಕುರಿತು ಶಾಸಕರಿಗೆ ಮಾಹಿತಿ ನೀಡಿದರು.
ಈ ಸಂದರ್ಭ ಕಸಾಪ ಜಿಲ್ಲಾ ನಿರ್ದೇಶಕರಾದ ಡೆನಿಸ್ ಡಿಸೋಜಾ, ಟಿ.ಜಿ.ಪ್ರೇಮಕುಮಾರ್, ಎಂ.ಇ.ಮೊಹಿದ್ದೀನ್, ಫ್ಯಾನ್ಸಿ ಮುತ್ತಣ್ಣ, ಕೆ.ಎನ್.ದೇವರಾಜು, ಮೆ.ನಾ.ವೆಂಕಟನಾಯಕ್, ತಾಲ್ಲೂಕು ಕಸಾಪ ಕಾರ್ಯದರ್ಶಿ ಎಸ್.ನಾಗರಾಜು, ಕೋಶಾಧಿಕಾರಿ ಕೆ.ವಿ.ಉಮೇಶ್, ಮೆರವಣಿಗೆ ಸಮಿತಿ ಅಧ್ಯಕ್ಷ ವೆಂಕಟೇಶ ಪೂಜಾರಿ, ದ್ವಾರಗಳ ಸಮಿತಿಯ ನಾಗೇಗೌಡ, ಸಾಂಸ್ಕ್ರತಿಕ ಸಮಿತಿ ಸಂಚಾಲಕ ಉ.ರಾ.ನಾಗೇಶ್, ಪ್ರಚಾರ ಸಮಿತಿ ಸಂಚಾಲಕ ಹೆಚ್.ಎಂ.ರಘು, ಗಾಯಕ ಬಿ.ಎಸ್.ಪರಮೇಶ್, ಕಸಾಪ ಹೆಬ್ಬಾಲೆ ಘಟಕದ ಅಧ್ಯಕ್ಷ ಎಂ.ಎನ್.ಮೂರ್ತಿ, ತಾಲ್ಲೂಕು ಕಸಾಪ ನಿರ್ದೇಶಕರಾದ ಎಂ.ಎನ್.ಕಾಳಪ್ಪ, ಟಿ.ಬಿ.ಮಂಜುನಾಥ್, ಭಾರತಿ, ಕಾಮಾಕ್ಷಿ, ಟಿ.ವಿ.ಶೈಲಾ ಮೊದಲಾದವರಿದ್ದರು.









