ಮಡಿಕೇರಿ ಜ.25 : ಕೊಡಗು ಜಿಲ್ಲಾ ಆಯುಷ್ ಇಲಾಖೆಯ ವತಿಯಿಂದ 2022-23ನೇ ಸಾಲಿನ ಪರಿಶಿಷ್ಟ ಜಾತಿ ಉಪಯೋಜನೆ/ಪಂಗಡ ಉಪಯೋಜನೆಯಡಿಯಲ್ಲಿ ಆಯೋಜಿಸಲಾಗುವ “ಆಯುಷ್ ಸೇವಾ ಗ್ರಾಮ” ಕಾರ್ಯಕ್ರಮ ಕುರಿತ ಕ್ಯಾಲೆಂಡರ್ ಹಾಗೂ ಭಿತ್ತಿ ಪತ್ರಗಳು ಮತ್ತು ಐಇಸಿ ಪರಿಕರಗಳನ್ನು ಜಿಲ್ಲಾಧಿಕಾರಿ ಡಾ.ಬಿ.ಸಿ ಸತೀಶ ಅವರು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ವೆಂಕಟೇಶ್, ಜಿಲ್ಲಾ ಆಯುಷ್ ಅಧಿಕಾರಿ ಡಾ. ರೇಣುಕಾದೇವಿ ಹಾಗೂ ಆಯುಷ್ ಇಲಾಖೆಯ ಸಿಬ್ಬಂದಿಗಳು ಇತರರು ಇದ್ದರು.
ಕಾರ್ಯಕ್ರಮದ ರೂಪುರೇಷೆಗಳು: ಸಮೀಕ್ಷೆ: ಗ್ರಾಮದ ಜನಸಂಖ್ಯೆ, ಆರೋಗ್ಯ ಮಾಹಿತಿ, ಆರ್ಥಿಕ ಪರಿಸ್ಥಿತಿ, ಜೀವನಶೈಲಿ, ಕೈತೋಟದ ಮಾಹಿತಿ ಎಲ್ಲವನ್ನು ಮನೆ ಮನೆ ಭೇಟಿಯ ಮುಖಾಂತರ ವಿಷಯ ಸಂಗ್ರಹ ಮಾಡಲಾಗುವುದು.
ಆರೋಗ್ಯ ತಪಾಸಣೆ ಮತ್ತು ಔಷಧಿ ವಿತರಣೆ: ಸಮೀಕ್ಷೆಯ ಆಧಾರದ ಮೇಲೆ ನಿಗದಿತ ಖಾಯಿಲೆಯಿಂದ ಬಳಲುತ್ತಿರುವ ಜನರಿಗೆ ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ ಹಾಗೂ ಔಷಧ ವಿತರಣೆ. ಗ್ರಾಮದ ಜನರ ಆರೋಗ್ಯ ರಕ್ಷಣೆಗೆ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಿಟ್ ವಿತರಣೆ.
ಆಯುಷ್ ಅರಿವು ಮತ್ತು ಔಷಧ ಸಸ್ಯಗಳ ವಿತರಣೆ: ಆಯುಷ್ ಪದ್ಧತಿಗಳ ಮೂಲಕ ಆರೋಗ್ಯ ರಕ್ಷಣೆಯ ಕುರಿತ ಸಂಪೂನ್ಮೂಲ ವ್ಯಕ್ತಿಯಿಂದ ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ಸಮೀಕ್ಷೆ ಆಧಾರದ ಮೇಲೆ ಕೈತೋಟ ಹೊಂದಿರುವ ಮನೆಗಳಿಗೆ ಔಷಧಿ ಸಸ್ಯಗಳ ವಿತರಣೆ ಹಾಗೂ ನುರಿತ ತಜ್ಞರಿಂದ ಅದನ್ನು ಬೆಳೆಸುವ ಮತ್ತು ಉಪಯೋಗಿಸುವ ಬಗ್ಗೆ ಮಾಹಿತಿ ನೀಡಲಾಗುವುದು.
ನೈರ್ಮಲ್ಯ ದಿನಚರ್ಯೆ, ಋತುಚರ್ಯೆ ಮಾಹಿತಿ: ವೈಯಕ್ತಿಕ ಶುಚಿತ್ವ, ಸುತ್ತಮುತ್ತಲಿನ ಸ್ವಚ್ಛತೆ, ಸಾಮಾಜಿಕ ಸ್ವಾಸ್ಥತೆ ಮತ್ತು ದಿನಚರ್ಯೆ, ಋತುಚರ್ಯೆ ಮೂಲಕ ಆರೋಗ್ಯ ಸಂರಕ್ಷಣೆ, ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕುರಿತು ಸಂಕ್ಷೀಪ್ತ ಮಾಹಿತಿ ತಿಳಿಸಲಾಗುವುದು.
ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಮಾಹಿತಿ: ಆಯುಷ್ ಪದ್ಧತಿಗಳಲ್ಲಿ, ಔಷಧ ರಹಿತ ಪದ್ಧತಿಯೆಂದೇ ಪ್ರಸಿದ್ಧವಾದ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಪದ್ಧತಿಯ ಮುಖಾಂತರ ಸಾಮಾನ್ಯ ಜನರಿಗೆ ಶಾರೀರಿಕ ಹಾಗೂ ಮಾನಸಿಕ ಸದೃಢತೆಗಾಗಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ತಜ್ಞರಿಂದ ಮಾಹಿತಿ ನೀಡಲಾಗುವುದು.
ಮನೆಮದ್ದು ಮತ್ತು ಆರೋಗ್ಯ ಜೀವನ ಶೈಲಿಯ ನಿರ್ವಹಣೆ: ಸಂಪನ್ಮೂಲ ವ್ಯಕ್ತಿಗಳಿಂದ ಮನೆಯಲ್ಲಿ ದಿನನಿತ್ಯ ಬಳಸುವ ಆಹಾರ ಸಾಮಾಗ್ರಿಗಳನ್ನು ಬಳಸಿಕೊಂಡು ಪ್ರಾರಂಭಿಕ ಹಂತದಲ್ಲಿ ರೋಗಗಳ ಚಿಕಿತ್ಸೆಯಾಗಿ ಉಪಯೋಗಿಸುವ ಬಗ್ಗೆ ಹಾಗೂ ವಿಶೇಷವಾಗಿ ಸಕ್ಕರೆ ಖಾಯಿಲೆ, ರಕ್ತದೊತ್ತಡ, ರಕ್ತ ಹೀನತೆ, ಸ್ಥೂಲಕಾಯ ಹಾಗೂ ಇನ್ನೂ ಮುಂತಾದ ಅನೇಕ ರೋಗಗಳು ಬಾರದಂತೆ ದೇಹವನ್ನು ರಕ್ಷಣೆ ಮಾಡುವ ವಿವರಣೆಯನ್ನು ನೀಡಲಾಗುವುದು.
ಜಿಲ್ಲೆಯಲ್ಲಿ ಆಯುಷ್ ಸೇವಾ ಗ್ರಾಮ ಕಾರ್ಯಕ್ರಮ ನಡೆಯುವ ಸ್ಥಳಗಳು: ಟಿ.ಎಸ್.ಪಿ ಯೋಜನೆಯಡಿ: ಕುಶಾಲನಗರ ತಾಲೂಕಿನ ಮುಳ್ಳುಸೋಗೆ ಗ್ರಾಮ, ಸೋಮವಾರಪೇಟೆ ತಾಲೂಕಿನ ಮಾಲಂಬಿ ಗ್ರಾಮ, ಮಡಿಕೇರಿ ತಾಲೂಕಿನ ಕರಿಕೆ ಗ್ರಾಮ ಹಾಗೂ ಎಸ್.ಸಿ.ಎಸ್.ಪಿ ಯೋಜನೆಯಡಿ: ಕುಶಾಲನಗರ ತಾಲೂಕಿನ ತೊರೆನೂರು ಗ್ರಾಮ ಮತ್ತು ಕೊಡಗರಳ್ಳಿ ಗ್ರಾಮ ಹಾಗೂ ) ಮಡಿಕೇರಿ ತಾಲೂಕು ಇಬ್ಬನಿವಳವಾಡಿ ಗ್ರಾಮದ ಬೋಯಿಕೇರಿ.