ಕುಶಾಲನಗರ ಜ.26 : ಕುಶಾಲನಗರದ ದಾರುಲ್ ಉಲೂಂ ಅರೆಬಿಕ್ ಮದ್ರಸದಲ್ಲಿ 74ನೇ ಗಣರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ದಾರುಲ್ ಉಲೂಂ ಅರೆಬಿಕ್ ಮದ್ರಸ, ಹಿಲಾಲ್ ಮಸೀದಿ ಹಾಗೂ ಸಮಸ್ತ ಕೇಂದ್ರೀಯ ಸುನ್ನಿ ಬಾಲ್ ವೇದಿ ಇವುಗಳ ಸಂಯುಕ್ತಾಶ್ರಯದಲ್ಲಿ ಗಣರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ “ಬಾಲ ಇಂಡಿಯಾ” ಕಾರ್ಯಕ್ರಮವನ್ನು ಹಿಲಾಲ್ ಮಸೀದಿಯ ಧರ್ಮಗುರು ಸೂಫಿ ದಾರಿಮಿರವರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಸಂವಿಧಾನ ಅರಿಯುವುದರ ಜೊತೆಗೆ ಸಂವಿಧಾನ ರಚನಾಕಾರರನ್ನು ಸ್ಮರಿಸುವ ಕೆಲಸ ನಮ್ಮಿಂದಾಗಬೇಕು ಎಂದರು.
ದಾರುಲ್ ಉಲೂಂ ಹಾಗೂ ಫಾಳಿಲಾ ಶರೀಅತ್ ಕಾಲೇಜಿನ ಪ್ರಾಂಶುಪಾಲ ತಮ್ಲೀಕ್ ದಾರಿಮಿ ಮಾತನಾಡಿ, ದೇಶದ ಸಂವಿಧಾನದ ಬಗ್ಗೆ, ಶ್ರಮಿಸಿದ ನೇತಾರರು ಹಾಗೂ ಸ್ವಾತಂತ್ರ್ಯ ಸೇನಾನಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಣೆ ನೀಡಿದರು.
ಕೂಡುಮಂಗಳೂರು ಗ್ರಾ.ಪಂ ಸದಸ್ಯ ಕೆ.ಬಿ.ಶಂಶುದ್ಧೀನ್ ಮಾತನಾಡಿ, ದೇಶದ ಸಂವಿಧಾನ ವಿಶ್ವದಲ್ಲೇ ಅತಿದೊಡ್ಡ ಸಂವಿಧಾನವಾಗಿದ್ದು, ಇದರ ಆಶಯ ಹಾಗೂ ಆದರ್ಶಗಳನ್ನು ಮೈಗೂಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿಲಾಲ್ ಮಸೀದಿ ಅಧ್ಯಕ್ಷ ಎಂ.ಎಂ.ಹುಸೇನ್ ಧ್ವಜಾರೋಹಣ ನೆರವೇರಿಸಿದರು.
ಹಿಲಾಲ್ ಮಸೀದಿ ಕಾರ್ಯದರ್ಶಿ ಅಬ್ದುಲ್ ಮಜೀದ್ ಸ್ವಾಗತ ಭಾಷಣವನ್ನು ಮಾಡಿದರು. ದಾರುಲ್ ಉಲೂಂ ಮದ್ರಸದ ಉನೈಸ್ ಫೈಜ಼ಿರವರು, ಪ್ರಾರ್ಥಿಸಿದರು. ಎಸ್.ಕೆ.ಎಸ್.ಎಸ್.ಎಫ್ ವತಿಯಿಂದ ಏರ್ಪಡಿಸಿದ್ದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಪ್ರಮಾಣಪತ್ರ ವಿತರಿಸಲಾಯಿತು. ಅಶ್ಫಾಕ್ ಹಾಗೂ ಸಂಗಡಿಗರಿಂದ ರಾಷ್ಟ್ರಗೀತೆ ಆಲಾಪಮೆ ನಡೆಯಿತು. ನಂತರ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಲಾಯಿತು.
ಈ ಸಂದರ್ಭ ಹಿಲಾಲ್ ಮಸೀದಿ ಕಮಿಟಿ ಪ್ರಮುಖರು ಹಾಗೂ ದಾರುಲ್ ಉಲೂಂ ಮದ್ರಸದ ಶಿಕ್ಷಕ ವೃಂದ ಹಾಗೂ ಫಾಳಿಲಾ ಶರೀಅತ್ ಕಾಲೇಜಿನ ಉಪನ್ಯಾಸಕರು ಇದ್ದರು.