ನಾಪೋಕ್ಲು ಜ.26 : ಕರ್ನಾಟಕ ಸರ್ಕಾರ, ಕೊಡಗು ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ವತಿಯಿಂದ ಸರಕಾರಿ ಶಾಲಾ ಮಕ್ಕಳ ಕಲಿಕೆ ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಕ್ಲಸ್ಟರ್ ನಲ್ಲಿ ಮಕ್ಕಳಿಗೋಸ್ಕರ ಕಲಿಕಾ ಹಬ್ಬವನ್ನು ಆಚರಿಸಲಾಗುತ್ತಿದ್ದು, ನಾಪೋಕ್ಲು ಕ್ಲಸ್ಟರ್ ವ್ಯಾಪ್ತಿಯ ಕಲಿಕಾ ಹಬ್ಬವನ್ನು ಎಮ್ಮೆಮಾಡಿನಲ್ಲಿ ಆಚರಿಸಲಾಯಿತು.
ಎಮ್ಮೆಮಾಡುವಿನ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಆವರಣದ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬದಲ್ಲಿ ಮಕ್ಕಳು ಆಟ-ಪಾಠಗಳೊಂದಿಗೆ ಸಂಭ್ರಮಿಸಿದರು.
ಎಮ್ಮೆಮಾಡು ಮುಖ್ಯರಸ್ತೆಯಲ್ಲಿ ಅತಿಥಿಗಳು, ಶಿಕ್ಷಕರು, ಕ್ಲಸ್ಟರ್ ನ ಶಾಲೆಯಿಂದ ಬಂದ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಸಾಗಿದರು.
ನಂತರ ನಡೆದ ಸಭಾ ಕಾರ್ಯಕ್ರಮವನ್ನು ಗ್ರಾ.ಪಂ ಅಧ್ಯಕ್ಷ ಆಯಿಸ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.
ಮಡಿಕೇರಿ ತಾಲೂಕಿನ ಕ್ಷೇತ್ರ ಸಂಪನ್ಮೂಲ ಆಧಿಕಾರಿ ಬಡ್ಡಿರ ನಳಿನಿ ಪೂವಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ಕಾರಿ ಶಾಲೆಯ ಮಕ್ಕಳಿಗೆ ಜ್ಞಾನ ಅಭಿವೃದ್ಧಿಸಿಕೊಳ್ಳಲು ಕಲಿಕಾ ಹಬ್ಬ ಉತ್ತಮ ಅವಕಾಶವಾಗಿದೆ ಇದನ್ನು ಎಲ್ಲಾ ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಪ್ರಾಥಮಿಕ ಮುಖ್ಯ ಶಿಕ್ಷಕ ಲೋಕೇಶ್ ಸ್ವಾಗತಿದರು. ಶಿಕ್ಷಕಿ ವಂಜಮ್ಮ ಪ್ರಾರ್ಥಿಸಿದರು. ಶಿಕ್ಷಕಿ ರಮ್ಯಾ ನಿರೂಪಿಸಿದರು. ಪ್ರೌಢಶಾಲಾ ಮುಖ್ಯ ಶಿಕ್ಷಕ ಪ್ರಸನ್ನ ಕುಮಾರ ವಂದಿಸಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಸದಸ್ಯರಾದ ಇಸ್ಮಾಯಿಲ್, ಐಸಮ್ಮ, ಗಪೂರ್, ಬಿ.ಆರ್.ಪಿ ಮಂಜುಳಾ ಚಿತ್ತಾಪುರ, ಸಿ.ಆರ್.ಪಿ ಸರಸ್ವತಿ, ಪ್ರಾಥಮಿಕ ಶಾಲೆಯ ಎಸ್ ಡಿ ಎಂಸಿ ಅಧ್ಯಕ್ಷ ಮೊಯಿದು ಕುಂಞಿ, ಪ್ರಾಥಮಿಕ ಶಾಲಾ ಅಧ್ಯಕ್ಷ ಅಶ್ರಫ್, ಸದಸ್ಯರಾದ ಮುಸ್ತಫಾ ಪಿ.ಎ, ಸದಸ್ಯರು, ವಿವಿಧ ಶಾಲಾ ಶಿಕ್ಷಕರು ಹಾಗೂ ಪೋಷಕರು ಹಾಜರಿದ್ದರು.
ವರದಿ : ದುಗ್ಗಳ ಸದಾನಂದ.