ಮಡಿಕೇರಿ ಜ.27 : ಕುಶಾಲನಗರದ ಗುಂಡೂರಾವ್ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಮೈದಾನದಲ್ಲಿ ಸಹರಾ ಕ್ರಿಕೆಟ್ ಕ್ಲಬ್ ಕುಶಾಲನಗರ ಹಮ್ಮಿಕೊಂಡಿದ್ದ ಐಪಿಎಲ್ ಮಾದರಿಯ ಎರಡನೇ ಆವೃತ್ತಿಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ,ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ನಿಗದಿತ ಐದು ಓವರ್ ನಲ್ಲಿ ಆರು ವಿಕೆಟ್ ನಷ್ಟಕ್ಕೆ 39 ರನ್ ಕಲೆ ಹಾಕಿದರು.
40 ರನ್ ಗಳ ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ತಂಡ ಫರ್ಹಾನ್ ಹಾಗೂ ಸಾಬುದ್ದೀನ್ ಅವರ ಅಮೋಘ ಜೊತೆಯಾಟದ ನೆರವಿನಿಂದ 3.5 ಓವರ್ ನಲ್ಲಿ ಒಂದು ವಿಕೆಟ್ ನಷ್ಟಕ್ಕೆ ಗುರಿ ತಲುಪಿ, ಚಾಂಪಿಯನ್ ಪಟ್ಟವನ್ನು ಅಲಂಕರಿಸಿದರು.
ಒಂದು ಲಕ್ಷ ರೂ ನಗದು ಬಹುಮಾನ ಹಾಗೂ ಒಂದು ಲಕ್ಷಕ್ಕೂ ಅಧಿಕ ಬೆಲೆಬಾಳುವ ಐಪಿಎಲ್ ಮುದ್ರಿತ ಚಿನ್ನದ ಟ್ರೋಫಿ ರಾಜಸ್ಥಾನ್ ತಂಡದ ಪಾಲಾಯಿತು.
ಸತತ ಎರಡನೇ ಬಾರಿಯ ಪ್ರಶಸ್ತಿಯನ್ನು ಗೆಲ್ಲುವ ಕನಸಿನಲ್ಲಿದ್ದ ಪಂಜಾಬ್ ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಇದಕ್ಕೂ ಮೊದಲು ನಡೆದ ಮೊದಲ ಕ್ವಾಲಿಫೈಯರ್ ಪಂದ್ಯವು ರಾಜಸ್ಥಾನ್ ರಾಯಲ್ಸ್ ಹಾಗೂ ಲಕ್ನೋ ಸೂಪರ್ ಜೈಂಡ್ಸ್ ತಂಡಗಳ ನಡುವೆ ನಡೆಯಿತು.
ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ತಂಡವು ಐದು ಓವರ್ ನಲ್ಲಿ ಆರು ವಿಕೆಟ್ ನಷ್ಟಕ್ಕೆ 34 ರನ್ ಕಲೆ ಹಾಕಿದರು.
ಲಕ್ನೋ ತಂಡವು ಒಂದು ರನ್ ಗಳಿಂದ ವಿರೋಜಿತ ಸೋಲು ಕಂಡು, ರಾಜಸ್ಥಾನ್ ತಂಡವು ಫೈನಲ್ ಪ್ರವೇಶಿಸಿತು. ಮೊದಲನೆಯ ಎಲಿಮಿನೇಟರ್ ಪಂದ್ಯವು ಗುಜರಾತ್ ಟೈಟಾನ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳ ನಡುವೆ ನಡೆಯಿತು.
ಮೊದಲು ಬ್ಯಾಟ್ ಮಾಡಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ಐದು ಓವರ್ ನಲ್ಲಿ ಆರು ವಿಕೆಟ್ ಕಳೆದುಕೊಂಡು 29 ರನ್ ಕಲೆ ಹಾಕಿತು. ಬೌಲಿಂಗ್ ನಲ್ಲಿ ಅದ್ಬುತ ಪ್ರದರ್ಶನ ನೀಡಿದ ಪಂಜಾಬ್ ತಂಡವು ಗುಜರಾತ್ ತಂಡದ ವಿರುದ್ಧ 15 ರನ್ ಗಳ ಭರ್ಜರಿ ಗೆಲುವು ಪಡೆದು ದ್ವಿತೀಯ ಕ್ವಾಲಿಫೈಯರ್ ಗೆ ಅರ್ಹತೆ ಪಡೆಯಿತು.
ಮೊದಲ ಕ್ವಾಲಿಫೈಯರ್ ನಲ್ಲಿ ಸೋಲು ಕಂಡ ಲಕ್ನೋ ಹಾಗೂ ಮೊದಲ ಎಲಿಮಿನೇಟರ್ ಗೆಲುವು ಪಡೆದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳ ನಡುವೆ ದ್ವಿತೀಯ ಕ್ವಾಲಿಫೈಯರ್ ಪಂದ್ಯ ನಡೆಯಿತು.
ಮೊದಲ ಬ್ಯಾಟ್ ಮಾಡಿದ ಪಂಜಾಬ್ ತಂಡವು ನಾಲ್ಕು ವಿಕೆಟ್ ನಷ್ಟಕ್ಕೆ ಐದು ಓವರ್ ನಲ್ಲಿ 64 ರನ್ ಗಳ ಬೃಹತ್ ಮೊತ್ತವನ್ನು ಕಲೆ ಹಾಕಿದರು.
ಬೌಲಿಂಗ್ ನಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದ ಪಂಜಾಬ್ ತಂಡ ಲಕ್ನೋ ತಂಡದ ಎಂಟು ವಿಕೆಟ್ ಪಡೆದುಕೊಂಡು 43 ರನ್ ಗಳ ಭರ್ಜರಿ ಗೆಲುವು ಸಾಧಿಸಿ, ಫೈನಲ್ ಪ್ರವೇಶಿಸಿತು.
ಪಂದ್ಯಾವಳಿಯ ಮೋಸ್ಟ್ ವ್ಯಾಲ್ಯೂಬಲ್ ಪ್ಲೇಯರ್ ಪಂಜಾಬ್ ತಂಡದ ಹರೀಶ್,ಬೆಸ್ಟ್ ಬ್ಯಾಟ್ಸ್‌ಮನ್ ಹರೀಶ್ ಪಂಜಾಬ್, ಬೆಸ್ಟ್ ಬೌಲರ್ ರಾಜಸ್ಥಾನ್ ರಾಯಲ್ಸ್ ತಂಡದ ಶಿಯಾಬ್,ಬೆಸ್ಟ್ ವಿಕೇಟ್ ಕೀಪರ್ ಗುಜರಾತ್ ತಂಡದ ರಿಯಾಸ್ (ಇಯ್ಯಾ) ಬೆಸ್ಟ್ ಕ್ಯಾಪ್ಟನ್ ಲಕ್ನೋ ತಂಡದ ಪರ್ಹಾನ್ ಹಾಗೂ ಫೆಯರ್ ಪ್ಲೇ ತಂಡದ ಪ್ರಶಸ್ತಿ ಗುಜರಾತ್ ತಂಡದ ಪಡೆದುಕೊಂಡಿತು.