ವಿರಾಜಪೇಟೆ ಜ.27 : ಕನ್ನಡ ಭಾಷೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕರ್ನಾಟಕ ಸಂಘ ಹೆಚ್ಚು ಕನ್ನಡ ಕಾರ್ಯಕ್ರಮಗಳನ್ನು ಹಮ್ಮಿಕೋಳ್ಳುವುದು ಉತ್ತಮ. ಇದಕ್ಕೆ ಸರಕಾರ ಕನ್ನಡ ಸಂಸ್ಕೃತಿ ಇಲಾಖೆಯ ಸಹಕಾರವು ಅಗತ್ಯವಾಗಿದೆ ಎಂದು ಚೇರಂಬಾಣೆಯ ಸಮಾಜ ಸೇವಕ ತೇಲಪಂಡ ಶಿವಕುಮಾರ್ ನಾಣಯ್ಯ ಅಭಿಪ್ರಾಯಪಟ್ಟರು.
ಗಣರಾಜ್ಯೋತ್ಸವದ ಅಂಗವಾಗಿ ವಿರಾಜಪೇಟೆ ಕರ್ನಾಟಕ ಸಂಘದ ವತಿಯಿಂದ ಪುರಭವನದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸ್ಪರ್ಧಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಇತರ ರಾಜ್ಯಗಳಿಂದ ವ್ಯಾಪಾರಕ್ಕಾಗಿ ಬಂದವರು ಅವರ ರಾಜ್ಯದ ಭಾಷೆಯನ್ನೆ ಮಾತನಾಡುತ್ತಾರೆ, ಆದರೆ ಕರ್ನಾಟಕ ರಾಜ್ಯದಿಂದ ಹೊರ ರಾಜ್ಯಕ್ಕೆ ನಾವುಗಳು ಹೋದಾಗ ಆ ರಾಜ್ಯದ ಭಾಷೆಯಲ್ಲಿ ಮಾತನಾಡಬೇಕಾಗಿದೆ. ಆದರಿಂದ ಕರ್ನಾಟಕದಲ್ಲಿ ಯಾರೆ ಬಂದರು ಕನ್ನಡವನ್ನೆ ಮಾತನಾಡುವಂತಾಗಬೇಕು ಎಂದ ಶಿವಕುಮಾರ್ ನಾಣಯ್ಯ ಕನ್ನಡ ಪ್ರಾಚೀನ ಕಾಲದ ಭಾಷೆಯಾಗಿದ್ದು, ಅವರವರ ಮನೆಯಲ್ಲಿ ಯಾವುದೇ ಭಾಷೆ ಮಾತನಾಡಿದರು, ಪ್ರತಿಯೋಬ್ಬರೂ ಕನ್ನಡ ಭಾಷೆಗೆ ಆದ್ಯತೆ ನೀಡುವಂತಾಗಬೇಕು ಎಂದರು.
ಜಿ.ಪಂ ಮಾಜಿ ಸದಸ್ಯ ಮೂಕೊಂಡ ಶಶಿ ಸುಬ್ರಮಣಿ ಅವರು ದೀಪ ಬೆಳಗಿಸಿ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳ ಪ್ರತಿಭೆಯನ್ನು ತೋರಲು ಕರ್ನಾಟಕ ಸಂಘ ಏರ್ಪಡಿಸಿರುವ ಸ್ಪರ್ಧಾ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳುವ ಮೂಲಕ ತಮ್ಮ ಗುರಿ ಮುಟ್ಟುವಂತಾಗಬೇಕು. ಕರ್ನಾಟಕ ಸಂಘವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ನಮ್ಮ ಸಹಕಾರ ಸದಾ ಇರುವುದಾಗಿ ಹೇಳಿದರು.
ಕರ್ನಾಟಕ ಸಂಘದ ಅಧ್ಯಕ್ಷ ಮಾಳೇಟಿರ ಎಂ.ಬೆಲ್ಲು ಬೋಪಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಗಣರಾಜ್ಯೋತ್ಸವದಲ್ಲಿ ಇನ್ನು ಹೆಚ್ಚು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ತೀರ್ಮಾನಿಸಿದ್ದೆವು. ಆದರೆ ಸಂಘದ ಕಾರ್ಯದರ್ಶಿ ನಿಧನರಾದ ಕಾರಣ ಸಾಧ್ಯವಾಗಿಲ್ಲ, ಮುಂದಿನ ನವೆಂಬರ್ ತಿಂಗಳಲ್ಲಿ ಸಂಘದ ವತಿಯಿಂದ ಕನ್ನಡ ನಾಡು ನುಡಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಕನ್ನಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ಹೇಳಿದರು.
ಸಂಘದ ಕಾರ್ಯದರ್ಶಿ ಎಂ.ಬಿ.ಅರುಣ್ ಅಪ್ಪಣ್ಣ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಚೇನಂಡ ಈ. ಗಿರೀಶ್ ಪೂಣಚ್ಚ ಉಪಸ್ಥಿತರಿದ್ದು ಮಾತನಾಡಿದರು.
ಸ್ಪರ್ಧಾ ಕಾರ್ಯಕ್ರಮದ ತೀರ್ಪುಗಾರರಾಗಿ ತಾತಂಡ ಪ್ರಭಾ ನಾಣಯ್ಯ ಮತ್ತು ಎಂ.ಕುಸುಮ ಸೋಮಣ್ಣ ಭಾಗವಹಿಸಿದ್ದರು.
ಸಭೆಯಲ್ಲಿ ಸಂಘದ ಸದಸ್ಯರಾದ ಕೆ.ಯು ಗಣೇಶ್ ತಮ್ಮಯ್ಯ, ಸಿ.ಪಿ.ಕಾವೇರಪ್ಪ, ಎ.ಎಂ.ಜೋಯಪ್ಪ, ಪಿ.ಎಸ್.ನಂದ, ಎಂ.ರಾಣು ಮಂದಣ್ಣ, ಎಂ.ಜಿ.ಪೂಣಚ್ಚ, ಬಿ.ಆರ್.ಗಣೇಶ್, ಬಿ.ಗಣೇಶ್ ಬಿದ್ದಪ್ಪ, ಸಿ.ಎಂ. ಸುರೇಶ್ ನಾಣಯ್ಯ, ಸಹಕಾರ್ಯದರ್ಶಿ ಎಂ.ಸಿ.ಅಶೋಕ್ ಕಛೇರಿ ಕಾರ್ಯದರ್ಶಿ ಎಂ.ರಾಧ ಮತ್ತು ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸಭಾ ಕಾರ್ಯಕ್ರಮದ ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸ್ಪರ್ಧೆಗಳು ನಡೆದವು.