ವಿರಾಜಪೇಟೆ ಜ.30 : ಕ್ರೀಡಾ ಚಟುವಟಿಕೆಗಳು ಕ್ರೀಡಾಪಟುಗಳಲ್ಲಿ ಶಿಸ್ತು, ಸಮಯ ಪ್ರಜ್ಞೆ, ಗೆಳೆತನ ಹಾಗೂ ಸವಾಲನ್ನು ಸ್ವೀಕರಿಸುವ ಮನೋಭಾವವನ್ನು ಬೆಳೆಸಿ ವ್ಯಕ್ತಿತ್ವವನ್ನು ವಿಕಸನಗೊಳಿಸುತ್ತದೆ ಎಂದು ಚಾಣಕ್ಯ ಎಜುಕೇಷನ್ ಟ್ರಸ್ಟ್‌ನ ಕಾರ್ಯದರ್ಶಿ ಎಂ.ಬಿ. ಮಾಚಮ್ಮ ಅಭಿಪ್ರಾಯಪಟ್ಟರು.
ಪಟ್ಟಣದ ಚಾಣಕ್ಯ ಎಜುಕೇಷನ್ ಟ್ರಸ್ಟ್ ವತಿಯಿಂದ ಐಮಂಗಲದಲ್ಲಿ ನಡೆದ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಿಗೆ ವಿದ್ಯಾಸಂಸ್ಥೆಗಳು ಅವಕಾಶ ನೀಡಿದಾಗ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗುತ್ತದೆ. ಪಠ್ಯೇತರ ಚಟುವಟಿಕೆಗಳು ಪಠ್ಯಕ್ಕೆ ಪೂರಕವಾಗಿ ಆಯೋಜನೆಗೊಂಡರೆ ಇನ್ನಷ್ಟು ಉತ್ತಮ ಫಲಿತಾಂಶವನ್ನು ಕಾಣಲು ಸಾಧ್ಯ ಎಂದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಚಾಣಕ್ಯ ಎಜುಕೇಷನ್ ಟ್ರಸ್ಟ್ ಅಧ್ಯಕ್ಷೆ ಸಿ.ಎನ್.ಕವಿತಾ ಫಲಿತಾಂಶವನ್ನು ಸಕಾರಾತ್ಮಕವಾಗಿ ಸ್ವೀಕರಿಸುವ ಮನೋಭಾವವನ್ನು ಕ್ರೀಡೆ ಅಥವಾ ಕ್ರೀಡಾಕೂಟಗಳು ಬೆಳೆಸುತ್ತವೆ. ಕ್ರೀಡೆಗಳು ದೈಹಿಕ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯವನ್ನು ಗಟ್ಟಿಗೊಳಿಸಲು ಸಹಕಾರ ನೀಡುತ್ತವೆ ಎಂದರು.
ಸಂಸ್ಥೆಯ ಹಿರಿಯ ಉಪನ್ಯಾಸಕ ಎಂ.ಎಸ್.ಸುಬ್ಬಯ್ಯ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್ ಸೇರಿದಂತೆ ಸಾಮಾಜಿಕ ಜಾಲತಾಣಗಳಿಂದ ದೂರವಿದ್ದಷ್ಟು ಒಳಿತು. ಇದು ಶಿಕ್ಷಣದೊಂದಿಗೆ ಏಳಿಗೆಯನ್ನು ಹೊಂದಲು ಸಾಕಷ್ಟು ಸಮಯಾವಕಾಶವನ್ನು ಒದಗಿಸಿಕೊಡುತ್ತದೆ. ಮೊಬೈಲ್ ಮುಂತಾದವುಗಳಿಂದ ದೂರವಿದ್ದು ದೈಹಿಕ ಸಾಮರ್ಥ್ಯ ವನ್ನು ಹೆಚ್ಚಿಸುವ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ದಿನನಿತ್ಯ ಲವಲವಿಕೆಯಿಂದಿರಲು ಸಾಧ್ಯ ಎಂದರು.
ಉದ್ಘಾಟನಾ ಸಮಾರಂಭದಲ್ಲಿ ಗ್ರಾಮದ ಹಿರಿಯರಾದ ಕುಂಡ್ರಂಡ ಶಂಕರಿ, ಉಪನ್ಯಾಸಕರಾದ ಪಾರ್ವತಿ ಎಂ.ಎಂ, ರಮ್ಯಾ ಮಂಜುನಾಥ್ ಹಾಗೂ ಮಾಣಿಕ್ಯ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಹರ್ಷಿತಾ ಸ್ವಾಗತಿಸಿದರು. ವಿದ್ಯಾರ್ಥಿನಿ ಕೌಶಲ್ಯ ವಂದಿಸಿದರು.
ವಿಜೇತರು: ವಾರ್ಷಿಕ ಕ್ರೀಡಾಕೂಟದ ಅಂಗವಾಗಿ ಸಂಸ್ಥೆಯ ಬಾಲಕರಿಗೆ ನಡೆದ ಕಬಡ್ಡಿ ಪಂದ್ಯವನ್ನು ಭಗತ್ ಸಿಂಗ್ ತಂಡ ಗೆದ್ದುಕೊಂಡಿತು. ಫುಟ್ಬಾಲ್ ಪಂದ್ಯದಲ್ಲಿ ಸಂಗೊಳ್ಳಿ ರಾಯಣ್ಣ ತಂಡ ಪ್ರಶಸ್ತಿಯನ್ನು ಪಡೆದುಕೊಂಡಿತು. ಕ್ರಿಕೆಟ್ ಪಂದ್ಯದಲ್ಲಿ ಭಗತ್ ಸಿಂಗ್ ತಂಡ 8 ವಿಕೇಟ್‍ಗಳಿಂದ ಗೆಲುವು ದಾಖಲಿಸುವ ಮೂಲಕ ಪ್ರಶಸ್ತಿ ತನ್ನದಾಗಿಸಿಕೊಂಡಿತು.
ಬಾಲಕಿಯರಿಗಾಗಿ ನಡೆದ ಹಗ್ಗಾಜಗ್ಗಾಟ ಸ್ಪರ್ಧೆಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ತಂಡ ಗೆಲುವು ದಾಖಲಿಸಿತು. ಬಾಲಕಿಯರಿಗೆ ನಡೆದ ಮಡಿಕೆ ಒಡೆಯುವ ಸ್ಪರ್ಧೆಯಲ್ಲಿ ಹರ್ಷಿತಾ ಪ್ರಥಮ ಸ್ಥಾನ ಪಡೆದರೆ, ಕೌಶಲ್ಯ ದ್ವಿತೀಯ ಹಾಗೂ ಕಾವೇರಮ್ಮ ತೃತೀಯ ಸ್ಥಾನ ಪಡೆದುಕೊಂಡರು. ವಿಷದ ಚೆಂಡು ಸ್ಪರ್ಧೆಯಲ್ಲಿ ಆದಿತ್ಯ ಪ್ರಥಮ ಸ್ಥಾನ ಪಡೆದರೆ, ನಿತ್ಯ ದ್ವಿತೀಯ ಹಾಗೂ ಯಶ್ವಂತ್ ತೃತೀಯ ಸ್ಥಾನ ಪಡೆದುಕೊಂಡರು.