ಮಡಿಕೇರಿ ಜ.30 : ಕನ್ನಡಕ್ಕೆ ಬೇರೆ ಭಾಷೆಯವರಿಂದ ಯಾವುದೇ ತೊಂದರೆ ಇಲ್ಲ. ಕನ್ನಡಿಗರಿಂದಲೇ ತೊಂದರೆ ಇರುವುದು. ಕನ್ನಡಿಗರು ಕನ್ನಡ ಮಾತನಾಡಿದರೆ ಸಾಕು ಕನ್ನಡ ಉಳಿದು ಬೆಳೆಯುತ್ತದೆ ಎಂದು ಗೋಣಿಕೊಪ್ಪಲಿನ ಉದ್ಯಮಿ ಕೊಳ್ಳಿಮಾಡ ಅಜಿತ್ ಅಯ್ಯಪ್ಪ ನುಡಿದರು.
ಗೋಣಿಕೊಪ್ಪಲಿನ ನವಮಿ ಸಭಾಂಗಣದಲ್ಲಿ ನಡೆದ ಪೊನ್ನಂಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಉದ್ಘಾಟನಾ ಸಮಾರಂಭದಲ್ಲಿ ಹೋಬಳಿ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇತ್ತೀಚಿನ ದಿನಗಳಲ್ಲಿ ಕನ್ನಡದ ಬೆಳವಣಿಗೆಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹೋಬಳಿ ಮಟ್ಟದಲ್ಲೂ ಘಟಕಗಳನ್ನು ರಚಿಸಿಕೊಂಡು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.
ಪೊನ್ನಂಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಅವರಿಗೆ ಧ್ವಜ ಹಸ್ತಾಂತರಿಸುವ ಮೂಲಕ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಜವಾಬ್ದಾರಿ ನೀಡಿದರು.
ನಂತರ ಘಟಕದ ಎಲ್ಲಾ ನೂತನ ಪದಾಧಿಕಾರಿಗಳಿಗೆ ಜವಾಬ್ದಾರಿ ಸ್ವೀಕರಿಸುವ ಪ್ರತಿಜ್ಞಾವಿಧಿ ಬೋಧನೆ ಮಾಡಿದರು. ಘಟಕದ ನೂತನ ಗೌರವ ಕಾರ್ಯದರ್ಶಿಯಾಗಿ ತಿರುನೆಲ್ಲಿಮಾಡ ಬಿ.ಜೀವನ್ ಮತ್ತು ಟಿ.ಕೆ.ವಾಮನ, ಗೌರವ ಕೋಶಾಧಿಕಾರಿಯಾಗಿ ಎಂ.ಕೆ.ಚಂದನ್ ಕಾಮತ್, ಸಂಘಟನಾ ಕಾರ್ಯದರ್ಶಿಯಾಗಿ ಎನ್.ಕೆ. ನಾರಾಯಣಸ್ವಾಮಿ ನಾಯ್ಡು, ನಿರ್ದೇಶಕರುಗಳಾಗಿ ವಿ.ಟಿ.ಶ್ರೀನಿವಾಸ್, ಡಿ.ಚಂದನ, ಐ.ಎಂ.ರೋಜಿ, ಟಿ.ಎಸ್. ಮಹೇಶ್, ಎಚ್.ಆರ್.ಮಧು, ಕುಂಞಮಣಿ ಮತ್ತು ವಿಶೇಷ ಆಹ್ವಾನಿತರಾಗಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೊಣಿಯಂಡ ಅಪ್ಪಣ್ಣ, ಸಾಹಿತಿಗಳಾದ ಡಾ. ಜೆ.ಸೋಮಣ್ಣ, ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮನಕಮನೆ ಸೌಮ್ಯ ಬಾಲು, ಗೋಣಿಕೊಪ್ಪಲು ಗ್ರಾ ಪಂ ಅಭಿವೃದ್ಧಿ ಅಧಿಕಾರಿ ಪಿ.ವಿ.ಶ್ರೀನಿವಾಸ್, ಗುರುರಾಜ್ ರಾವ್, ಎಸ್.ಟಿ.ಗಿರೀಶ್, ಪಿ.ವಿ.ಶೋಭಿತ್ ಪ್ರತಿಜ್ಞಾವಿಧಿ ಮೂಲಕ ಜವಾಬ್ದಾರಿ ಸ್ವೀಕರಿಸಿದರು.
ನಂತರ ಮಾತನಾಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೇಶವ ಕಾಮತ್, ಜಿಲ್ಲೆಯಲ್ಲಿ ಈಗಾಗಲೇ ಐದು ತಾಲೂಕು ಸಮಿತಿಗಳನ್ನು 12 ಹೋಬಳಿ ಸಮಿತಿಗಳನ್ನು ರಚಿಸಲಾಗಿದೆ. ಈ ಬಾರಿ ಜಿಲ್ಲಾ ಸಮ್ಮೇಳನವನ್ನು ಪೊನ್ನಂಪೇಟೆ ತಾಲೂಕಿನ ಗೋಣಿಕೊಪ್ಪಲಿನಲ್ಲಿ ಆಯೋಜಿಸಲು ಜಿಲ್ಲಾ ಸಮಿತಿ ತೀರ್ಮಾನಿಸಿದ್ದು, ಎಲ್ಲರೂ ಸಹಕಾರದೊಂದಿಗೆ ಸಮ್ಮೇಳನ ನಡೆಸಲು ಅನುವು ಮಾಡಿಕೊಡಬೇಕೆಂದು ಕೋರಿದರು.
ಸಾಹಿತ್ಯ ಪರಿಷತ್ತಿನ ಹಿರಿಯ ಸದಸ್ಯ ವೈದ್ಯ ಡಾ. ಕೆ.ಕೆ ಶಿವಪ್ಪ ಮಾತನಾಡಿ, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. ಪೊನ್ನಂಪೇಟೆ ತಾಲೂಕು ರಾಜ್ಯದ ಗಡಿ ತಾಲೂಕಾಗಿದ್ದು ಇತರ ಭಾಷೆಗಳ ಪ್ರಭಾವ ಹೆಚ್ಚಾಗಿದೆ. ಇತರ ಭಾಷಿಕರು ನಮ್ಮಲ್ಲಿಗೆ ಬಂದು ಹಲವಾರು ವರ್ಷಗಳು ಕಳೆದಿದ್ದರೂ ಅವರು ಕನ್ನಡ ಕಲಿಯುತ್ತಿಲ್ಲ ಅವರಿಗೆ ಕನ್ನಡ ಕಲಿಸುವ ಕೆಲಸ ಮಾಡಬೇಕಿದೆ ಎಂದರು.
ಪೊನ್ನಂಪೇಟೆ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ. ಕೆ.ಚಂದ್ರಶೇಖರ್ ಮಾತನಾಡಿ, ಸಾಹಿತ್ಯ ಪರಿಷತ್ತಿನ ಎಲ್ಲಾ ಕಾರ್ಯಕ್ರಮಗಳಿಗೆ ಸಹಕಾರ ನೀಡುವುದಾಗಿ ನುಡಿದರು.
ಮಾಜಿ ಅಧ್ಯಕ್ಷ ಬಿ. ಎನ್ ಪ್ರಕಾಶ್ ಮಾತನಾಡಿ, ಪೊನ್ನಂಪೇಟೆ ಹೋಬಳಿಯ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿ ಕಾರ್ಯವು ಸ್ಥಗಿತಗೊಂಡಿದ್ದು ಅದನ್ನು ಗ್ರಾಮ ಪಂಚಾಯತಿಯ ಮೂಲಕ ಪೂರ್ಣ ಗೊಳಿಸಲಾಗುವುದು ಎಂದರು. ಗೋಣಿಕೊಪ್ಪಲು ಗ್ರಾ.ಪಂ ಅಧ್ಯಕ್ಷ ಮನಕಮನೆ ಸೌಮ್ಯ ಬಾಲು ಮಾತನಾಡಿ, ನಮ್ಮ ಊರಿನಲ್ಲಿ ನಡೆಯುವ ಸಾಹಿತ್ಯ ಸಮ್ಮೇಳಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ನೂತನವಾಗಿ ಹೋಬಳಿ ಅಧ್ಯಕ್ಷ ಜವಾಬ್ದಾರಿಯನ್ನು ಸ್ವೀಕರಿಸಿದ ಕುಲ್ಲಚಂಡ ಪ್ರಮೋದ್ ಗಣಪತಿ ಮಾತನಾಡುತ್ತಾ ಹೋಬಳಿ ಘಟಕವನ್ನು ಜಿಲ್ಲೆಯ ಉತ್ತಮವಾದ ಘಟಕವನ್ನಾಗಿ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.ಅಧಿಕಾರ ಸ್ವೀಕರಿಸಿದ ಕೂಡಲೇ ಮಹತ್ತರ ವಾದ ಜವಾಬ್ದಾರಿಯನ್ನು ನಮಗೆ ನೀಡಲಾಗಿದೆ ಅತ್ಯುತ್ತಮವಾದ ರೀತಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಚರಿಸುವ ಮೂಲಕ ನಮ್ಮ ಸಾಮರ್ಥ್ಯವನ್ನು ತೋರಿಸಿ ಕೊಡಬೇಕಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೋಳೆರ ದಯಾ ಚಂಗಪ್ಪ ಮಾತನಾಡಿ, ಜಿಲ್ಲಾ ಸಮ್ಮೇಳನವನ್ನು ತಾಲೂಕಿನ ಸಾಹಿತ್ಯ ಪರಿಷತ್ ಸದಸ್ಯರು ಮಾತ್ರವಲ್ಲದೆ ಶಾಸಕರ, ಸರಕಾರಿ ಅಧಿಕಾರಿಗಳ, ತಾಲೂಕಿನ ಎಲ್ಲಾ ಗ್ರಾ.ಪಂ ಅಧ್ಯಕ್ಷ ಮತ್ತು ಸದಸ್ಯರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ, ಸಂಘ ಸಂಸ್ಥೆಗಳ, ಶಾಲಾ ಆಡಳಿತ ಮಂಡಳಿ ಮತ್ತು ಅಧ್ಯಾಪಕರುಗಳ, ವಿದ್ಯಾರ್ಥಿಗಳ, ಯುವಕ ಯುವತಿ ಮಂಡಳಿಗಳ, ಸ್ತ್ರೀಶಕ್ತಿ ಒಕ್ಕೂಟ, ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಸಂಜೀವಿನಿ ಒಕ್ಕೂಟ, ಇವರೆಲ್ಲರ ಸಹಕಾರದೊಂದಿಗೆ ಸಂಘಟಿಸಿ ಮಾದರಿ ಕಾರ್ಯಕ್ರಮವನ್ನಾಗಿ ಮಾಡಲಾಗುವುದು ಎಂದರು.
ವೇದಿಕೆಯಲ್ಲಿ ಪೊನ್ನಂಪೇಟೆ ತಾಲೂಕು ಗೌರವ ಕಾರ್ಯದರ್ಶಿ ಕೆ.ವಿ.ರಾಮಕೃಷ್ಣ, ಶೀಲಾ ಬೋಪಣ್ಣ, ಗೌರವ ಕೋಶಾಧಿಕಾರಿ ಪಿ.ಜಿ.ರಾಜಶೇಖರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳು ಸೇರಿದಂತೆ ಗ್ರಾ.ಪಂ ಮಾಜಿ ಅಧ್ಯಕ್ಷೆ ಚೈತ್ರಾ ಬಿ.ಚೇತನ್ ಸದಸ್ಯರುಗಳಾದ ಧ್ಯಾನ್ ಸುಬ್ಬಯ್ಯ, ಶರತ್ ಕಾಂತ, ಪಿ.ಧನಲಕ್ಷ್ಮಿ, ಪಿ.ವಿ.ಸುನೀತಾ , ಸುಲೇಖ, ಪಿ.ಕೆಮಣಿ, ಟಿ.ಕೆ. ಅಬ್ದುಲ್ ಸಮ್ಮದ್, ಲಕ್ಷ್ಮಿ ರೆಡ್ಡಿ, ಕನ್ನಡ ಸಾಹಿತ್ಯ ಪರಿಷತ್ತು ಸದಸ್ಯರುಗಳಾದ ಕೆ.ಬಾಲಕೃಷ್ಣ ರೈ, ಪಿ.ಕೆ.ಪ್ರವೀಣ್, ಸಂಧ್ಯಾ ಕಾಮತ್, ಅಕ್ಷತಾ ಭಟ್, ವಿಷ್ಣುಮೂರ್ತಿ, ಚಂದ್ರಕಲಾ, ವಿನೋದ್ ಟಿ ಆರ್, ಬಿ.ಎಸ್ ಸುರೇಶ್, ಜಿ.ಆರ್ ಕೃಷ್ಣೇಗೌಡ, ಬಿ.ಆರ್ ಕೀರ್ತಿ ಕುಮಾರ್, ಧನು, ಎನ್.ಎಸ್ ಸುಬ್ರಮಣಿ, ಆರ್ ಧನಲಕ್ಷ್ಮಿ ಉಪಸ್ಥಿತರಿದ್ದರು.








