ವಿರಾಜಪೇಟೆ ಜ.30 : ವಿದ್ಯಾರ್ಥಿಗಳು ತಮ್ಮ ಜೀವನದ ಭವಿಷ್ಯವನ್ನು ಕ್ರೀಡೆಯಲ್ಲಿಯೇ ರೂಪಿಸಿ ಕೊಳ್ಳುವಂತಾಗಬೇಕು ಎಂದು ಭಾರತದ ಪ್ರತಿಷ್ಟಿತ ಫುಟ್ಬಾಲ್ ಲೀಗ್‍ನಲ್ಲಿ ಅನುಭವದ ಐಎಸ್‍ಎಲ್ ಆಟಗಾರ ತಮಿಳುನಾಡಿನ ಧನ್‍ಪಾಲ್ ಗಣೇಶ್ ಹೇಳಿದರು.
ವಿರಾಜಪೇಟೆ ನಗರದ ಪ್ರಗತಿ ವಿದ್ಯಾಸಂಸ್ಥೆಯ ಮೈದಾನದಲ್ಲಿ 8 ರಿಂದ 13 ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಫುಟ್ಬಾಲ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಮಕ್ಕಳ ಮುಂದಿನ ಭವಿಷ್ಯಕ್ಕೆ ಫುಟ್ಬಾಲ್ ಕ್ರೀಡೆಯು ಸಹಕಾರಿಯಾಗಲಿದ್ದು ಉತ್ತಮ ಕ್ರೀಡಾಪಟುಗಳಾಗಿ ಜಿಲ್ಲೆ, ರಾಜ್ಯ , ನಂತರ ರಾಷ್ರಮಟ್ಟದಲ್ಲಿಯು ಭಾಗವಹಿಸುವಂತೆ ಧನ್‍ಪಾಲ್ ಹಾರೈಸಿದರು.
ಪ್ರಗತಿ ಶಾಲಾ ಮುಖ್ಯಸ್ಥರು ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ 8 ರಿಂದ 13 ವರ್ಷದ ಮಕ್ಕಳಿಗೆ ಫುಟ್ಬಾಲ್ ಪಂದ್ಯಾವಳಿ ಬಗ್ಗೆ ಮಾಹಿತಿ ನೀಡುವ ಮೂಲಕ ಕಳೆದ ನಾಲ್ಕು ವಾರಗಳಿಂದಲು ಈ ಮೈದಾನದಲ್ಲಿ ವಿದ್ಯಾರ್ಥಿಗಳ 18 ತಂಡಗಳ ಪಂದ್ಯಾವಳಿ ನಡೆಯುತ್ತಿದ್ದು ನಂತರ ಅಮ್ಮತ್ತಿಯ ಮೈದಾನದಲ್ಲಿ ಅಂತಿಮ ಫುಟ್ಬಾಲ್ ಪಂದ್ಯಾವಳಿ ನಡೆಯಲಿದೆ. ಕೊಡಗು ಫುಟ್ಬಾಲ್ ಅಷೋಸಿಯೇಶನ್ ಸಹಕಾರದೊಂದಿಗೆ ಕ್ರೀಡೆಯಲ್ಲಿ ಭಾಗವಹಿಸಿದ ಮಕ್ಕಳನ್ನು ಉತ್ತಮ ಕ್ರೀಡಾಪಟುಗಳನ್ನಾಗಿ ಬೆಳಸಿ ರಾಜ್ಯ ಮಟ್ಟದ ಕ್ರೀಡಾ ಪಟುಗಳಾಗಿ ಪಂದ್ಯಾವಳಿಯಲ್ಲಿ ಭಾಗವಹಿಸುವಂತೆ ಮಕ್ಕಳನ್ನು ಪ್ರೋತ್ಸಹಿಸಲಾಗುವುದು ಎಂದರು.
ಕೊಡಗು ಫುಟ್ಬಾಲ್ ಅಷೋಸಿಯೇಶನ್ ಅಧ್ಯಕ್ಷ ಜಗದೀಶ್ ಮಂದಪ್ಪ ಸಭೆಯನ್ನುದ್ದೇಶಿಸಿ ಮಕ್ಕಳನ್ನು ಉತ್ತಮ ಆಟಗಾರರನ್ನಾಗಿ ಬೆಳೆಸುವ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂದರು. ಅಶೋಸಿಯೇಶನ್ ಕಾರ್ಯದರ್ಶಿ ನಾಗೇಶ್ ಮಾತನಾಡಿ ಫುಟ್ಬಾಲ್ ಕ್ರೀಡೆಯ ಬಗ್ಗೆ ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಪ್ರೋತ್ಸಹ ನೀಡುವ ನಿಟ್ಟಿನಲ್ಲಿ ಕಳೆದ ಐದು ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ಕೊಡಗಿನ ಕ್ರೀಡಾಪಟುಗಳಾಗಿ ಮುಂದೆ ಬರಬೇಕೆಂದು ಮಕ್ಕಳಿಗೆ ಫುಟ್ಬಾಲ್ ಪಂದ್ಯಾವಳಿಗೆ ಪ್ರೋತ್ಸಹ ನೀಡಲಾಗುತ್ತಿದೆ. ಆದರೆ ಫುಟ್ಬಾಲ್ ಪಂದ್ಯಾಟಕ್ಕೆ ಮೈದಾನದ ಅವಶ್ಯಕತೆ ಇರುವುದಾಗಿ ತಿಳಿಸಿದರು.
ಭಾರತದ ಫುಟ್ಬಾಲ್ ಆಟಗಾರ ಧನ್‍ಪಾಲ್ ಗಣೇಶ್ ಅವರನ್ನು ವೇದಿಕೆಯಲ್ಲಿ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ಸನ್ಮಾನಿಸಿ ಗೌರವಿಸಿದರು.
ವಿದ್ಯಾರ್ಥಿಗಳಾದ ಸೈಮಾ ಸ್ವಾಗತಿಸಿದರು, ಈಜ್ಬಾ ನಿರೂಪಿಸಿದರೆ, ಅಸ್ನಾ ವಂದಿಸಿದರು.