ಸೋಮವಾರಪೇಟೆ ಜ.31 : ಪುಷ್ಪಗಿರಿ ಜೇಸಿ ಸಂಸ್ಥೆಯ ವತಿಯಿಂದ ಸಲ್ಯೂಟ್ ದಿ ಸೈಲೆಂಟ್ ವರ್ಕರ್ ಪ್ರಶಸ್ತಿ ಪ್ರದಾನ ಹಾಗೂ ಗಣರಾಜ್ಯೋತ್ಸವ ಅಂಗವಾಗಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ಬಿ.ಎಂ.ಬೆಳ್ಳಿಯಪ್ಪ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಯುವಶಕ್ತಿ ಬಲಿಷ್ಠವಾಗಿದಲ್ಲಿ ಮಾತ್ರ ಶಕ್ತಿದಾಯಕ ದೇಶ ಕಟ್ಟಲು ಸಾಧ್ಯ. ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಮೂಡಿಸುವ ಕೆಲಸವನ್ನು ಜೇಸಿ ಸಂಸ್ಥೆ ಮಾಡುತ್ತಿವೆ. ಕೇವಲ ತರಗತಿಯೊಳಗಿನ ಶಿಕ್ಷಣ ಜೀವನ ರೂಪಿಸುವುದಿಲ್ಲ. ಶಿಕ್ಷಣದೊಂದಿಗೆ ಇತರ ಸಾಮಾಜಿಕ ಚಟುವಟಿಕೆಗಳಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.
ಜೇಸಿ ಸಂಸ್ಥೆಯ ಅಧ್ಯಕ್ಷ ಎಂ.ಎ.ರುಬಿನಾ ಮಾತನಾಡಿ, ಯುವ ಜನರಿಗೆ ನಾಯಕತ್ವ ಬೆಳೆಸುವ ಕೆಲಸ ಜೇಸಿ ಸಂಸ್ಥೆ ಮಾಡುತ್ತಿದೆ. ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಗುರುತಿಸಿಲು ಪ್ರಬಂಧ, ರಸಪ್ರಶ್ನೆಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ವಿದ್ಯಾರ್ಥಿಗಳಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವೇದಿಕೆ ಕಲ್ಪಿಸುತ್ತಿದೆ ಎಂದರು.
ಪತ್ರಕರ್ತರಾದ ಹಿರಿಕರ ರವಿ ಹಾಗೂ ಪೊಲೀಸ್ ಮುಖ್ಯ ಪೇದೆ ಎ.ಎನ್. ರಮೇಶ ಅವರಿಗೆ ಸಲ್ಯೂಟ್ ದಿ ಸೈಲೆಂಟ್ ವರ್ಕರ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದೇ ಸಂದರ್ಭ 2030ರಲ್ಲಿ ಭಾರತ ಹೇಗಿರುತ್ತದೆ ಎಂಬ ವಿಷಯದ ಕುರಿತು ಏರ್ಪಡಿಸಲಾಗಿದ್ದ ಸ್ಪರ್ಧೆಯಲ್ಲಿ ಮೊದಲ ಬಹುಮಾನವನ್ನು ಆಯಿಷಾ ತ್ರಿಶಾನ ಪಡೆದರು. ಎಸ್. ವಿದ್ಯಾ ದ್ವಿತೀಯ, ಬಿ.ಸಿ. ಅನ್ವಿತ ತೃತೀಯ ಬಹುಮಾನ ಪಡೆದರು.
ರಸಪ್ರಶ್ನೆ ಸ್ಪರ್ಧೆಯಲ್ಲಿ ಮೊದಲ ಬಹುಮಾನವನ್ನು ಆಯಿಷಾ ತ್ರಿಶಾನ ಪಡೆದರು. ಬಿ.ಪಿ. ಪ್ರೇರಣ ದ್ವಿತೀಯ, ಎಸ್. ವಿಜಯಲಕ್ಷ್ಮೀ ತೃತೀಯ ಬಹುಮಾನ ಪಡೆದರು.
ವೇದಿಕೆಯಲ್ಲಿ ಜೇಸಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜಗದಾಂಭ ಗುರುಪ್ರಸಾದ್, ನಿಕಟಪೂರ್ವ ಅಧ್ಯಕ್ಷ ನೆಲ್ಸನ್ ದಿಸೋಜ ಹಾಗೂ ಜೂನಿಯರ್ ಜೇಸಿ ಅಧ್ಯಕ್ಷೆ ರಿಶಾ, ಉಪನ್ಯಾಸಕಿ ಎಂ.ಬಿ.ತಿಲೋತ್ತಮೆ ಇದ್ದರು.









