ಮಡಿಕೇರಿ ಜ.31 : ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ವತಿಯಿಂದ ಜಿಲ್ಲೆಯಾದ್ಯಂತ ಒಂದು ತಿಂಗಳ ಕಾಲ ಮನೆ ಮನೆ ಭೇಟಿ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷದ ಮಹತ್ವಾಕಾಂಕ್ಷೆಯ ಉಚಿತ ವಿದ್ಯುತ್ ಮತ್ತು ಮನೆಯೊಡತಿಗೆ ಮಾಸಿಕ ರೂ.2 ಸಾವಿರ ನೀಡುವ ಗೃಹಲಕ್ಷ್ಮಿ ಯೋಜನೆಯ ಪ್ರಚಾರವನ್ನು ಇದೇ ಸಂದರ್ಭ ಹಮ್ಮಿಕೊಳ್ಳಲಾಗುವುದು ಎಂದರು.
ಕೆಪಿಸಿಸಿ ಸೂಚನೆಯಂತೆ ರಾಜ್ಯವ್ಯಾಪಿ ಕಾಂಗ್ರೆಸ್ ಪ್ರಚಾರ ಕಾರ್ಯ ನಡೆಯಲಿದ್ದು, ಕೊಡಗಿನಲ್ಲೂ ಮನೆ ಮನೆ ಭೇಟಿ ಕಾರ್ಯಕ್ರಮಕ್ಕೆ ಫೆ.3 ರಂದು ಚಾಲನೆ ನೀಡಲಾಗುವುದು. ಕಾಂಗ್ರೆಸ್ ಪರ ಪ್ರಚಾರದೊಂದಿಗೆ ಬಿಜೆಪಿ ನೇತೃತ್ವದ ಸರ್ಕಾರದ ಭ್ರಷ್ಟಾಚಾರ ಮತ್ತು ಆಡಳಿತದ ವೈಫಲ್ಯಗಳನ್ನು ಜನರ ಮುಂದಿಡುವ ಅಭಿಯಾನ ನಡೆಯಲಿದೆ.
ಪ್ರತಿ ಬ್ಲಾಕ್, ವಲಯ ಮತ್ತು ನಗರದ ವಾರ್ಡ್ ಗಳಲ್ಲಿ ಎರಡು ಪ್ರಚಾರ ಸಭೆಗಳನ್ನು ನಡೆಸಲಾಗುವುದು. ಎಲ್ಲಾ ಮತಗಟ್ಟೆಗಳಲ್ಲಿ ಪ್ರಚಾರ ಸಮಿತಿಗಳನ್ನು ರಚಿಸಲಾಗುವುದು. ತಲಾ 50 ಸದಸ್ಯರ ತಂಡಗಳನ್ನು ರಚಿಸಲಾಗುವುದು. ಮನೆ ಮನೆಗೆ ಭೇಟಿ ನೀಡುವ ಸಂದರ್ಭ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವಂತೆ ರಾಜಕೀಯಾಸಕ್ತರಲ್ಲಿ ಮನವಿ ಮಾಡಿಕೊಳ್ಳಲಾಗುವುದು.
ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಸಂಯೋಜಕರುಗಳನ್ನು ನೇಮಕ ಮಾಡಲಾಗುವುದು. ಪ್ರತಿಮತಗಟ್ಟೆಯಲ್ಲಿ ಮೂವರು ಸಂಯೋಜಕರು ಕಾರ್ಯನಿರ್ವಹಿಸಲಿದ್ದಾರೆ. ಬ್ಲಾಕ್ ಮತ್ತು ವಲಯ ಕಾಂಗ್ರೆಸ್ ಪ್ರಮುಖರ ಹಾಗೂ ಸದಸ್ಯರ ಸಹಕಾರದೊಂದಿಗೆ ಎಲ್ಲಾ ಪ್ರಚಾರ ಕಾರ್ಯಗಳು ನಡೆಯಲಿದೆ ಎಂದು ಟಿ.ಪಿ.ರಮೇಶ್ ಮಾಹಿತಿ ನೀಡಿದರು.
ಕೊಡಗಿನ 2 ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲಲೇಬೇಕೆನ್ನುವ ಗುರಿಯೊಂದಿಗೆ ಪಕ್ಷ ಕಾರ್ಯನಿರ್ವಹಿಸುತ್ತಿದ್ದು, ಹಲವರ ಒತ್ತಾಯದಂತೆ ಅಭ್ಯರ್ಥಿಗಳನ್ನು ಶೀಘ್ರ ಘೋಷಿಸುವ ಸಾಧ್ಯತೆಗಳಿದೆ ಎಂದು ಸ್ಪಷ್ಟಪಡಿಸಿದರು.
ಅಹಿಂಸೆ, ಶಾಂತಿ, ಸೌಹಾರ್ದತೆ ಮತ್ತು ಪ್ರೇಮದ ತಳಹದಿಯ ಮೇಲೆ ಕಾಂಗ್ರೆಸ್ ಪಕ್ಷ ಜನಬೆಂಬಲ ಪಡೆಯುತ್ತದೆ. ಇದೇ ಸಂದೇಶದೊಂದಿಗೆ ದೇಶವ್ಯಾಪಿ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಡೆದ “ಭಾರತ್ ಜೋಡೋ” ಯಾತ್ರೆ ಯಶಸ್ವಿಯಾಗಿದೆ ಎಂದು ಅವರು ಇದೇ ಸಂದರ್ಭ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಐ.ಮುನೀರ್ ಅಹಮ್ಮದ್, ಮಡಿಕೇರಿ ನಗರಾಧ್ಯಕ್ಷ ಬಿ.ವೈ.ರಾಜೇಶ್ ಹಾಗೂ ಉಪಾಧ್ಯಕ್ಷ ಲಿಯಾಕತ್ ಆಲಿ ಉಪಸ್ಥಿತರಿದ್ದರು.









