ಮಡಿಕೇರಿ ಫೆ.1 : ನೌಕರಿಯನ್ನು ಖಾಯಂಗೊಳಿಸುವಂತೆ ಒತ್ತಾಯಿಸಿ ಮಡಿಕೇರಿ ನಗರಸಭಾ ಗುತ್ತಿಗೆ ನೌಕರರು ಕೆಲಸವನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರವನ್ನು ಆರಂಭಿಸಿದ್ದಾರೆ.
ನಗರಸಭಾ ಕಚೇರಿ ಎದುರು ಶಾಂತಿಯುತ ಧರಣಿ ಸತ್ಯಾಗ್ರಹ ನಡೆಸುತ್ತಿರುವ ನೌಕರರು ಹಾಗೂ ಕರ್ನಾಟಕ ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ನೌಕರರ ಸಂಘದ ಪದಾಧಿಕಾರಿಗಳು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಡಿ.ಈರಪ್ಪ ಮಾತನಾಡಿ ಸರ್ಕಾರ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಾಹನ ಚಾಲಕರು, ನೀರು ಸರಬರಾಜು ಸಹಾಯಕರು, ಡಾಟ ಆಪರೇಟರುಗಳು ಸೇರಿದಂತೆ 15 ಸಾವಿರಕ್ಕು ಹೆಚ್ಚು ನೌಕರರನ್ನು ಗುತ್ತಿಗೆ ಆಧಾರದಲ್ಲಿ ಉಳಿಸಿಕೊಂಡು ತಾರತಮ್ಯ ಎಸಗುತ್ತಿದೆ ಎಂದು ಆರೋಪಿಸಿದರು.
ಹೊರಗುತ್ತಿಗೆ ನೌಕರರನ್ನು ಪೌರಕಾಮಿಕರ ಮಾದರಿಯಲ್ಲಿ ನೇರ ವೇತನ ಪಾವತಿಗೊಳಪಡಿಸುವವರೆಗೆ ಮುಷ್ಕರ ಮುಂದುವರೆಯಲಿದೆ ಎಂದು ತಿಳಿಸಿದರು.
ನೀರು ಸರಬರಾಜುದಾರರು, ಡಾಟಾ ಆಪರೇಟರ್‍ಗಳು, ಸ್ವಚ್ಛತಾ ಕಾರ್ಮಿಕರು ಕೆಲಸವನ್ನು ಸ್ಥಗಿತಗೊಳಿಸಿ ಮೌನ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದರು.
ಉಪಾಧ್ಯಕ್ಷ ಎ.ಎ.ಬೋಪಣ್ಣ, ಕಾರ್ಯದರ್ಶಿ ಟಿ.ಬಿ.ರಮೇಶ್ ಕುಟ್ಟಪ್ಪ, ಖಜಾಂಚಿ ಎಂ.ಎ.ಕಬೀರ್ ಅಹಮ್ಮದ್, ಸಂಚಾಲಕ ಹಾಗೂ ನಗರಸಭಾ ಗುತ್ತಿಗೆ ಆಧಾರದ ನೌಕರರು ಧರಣಿಯಲ್ಲಿ ಪಾಲ್ಗೊಂಡಿದ್ದಾರೆ.