ಮಡಿಕೇರಿ ಫೆ.1 : , ವಿರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಖ್ಯಾತ ಆಧ್ಯಾತ್ಮಿಕ ಬರಹಗಾರ ಕೆ. ಕೇಶವ ಭಟ್ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.
ವಿರಾಜಪೇಟೆ ಪುರಭವನದಲ್ಲಿ ಕ.ಸಾ.ಪ ಪ್ರಮುಖರು ಹಾಗೂ ಪದಾಧಿಕಾರಿಗಳು ಕೇಶವ ಭಟ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು.
ಈ ಸಂದರ್ಭ ಕಸಾಪ ತಾಲೂಕು ಕೋಶಾಧಿಕಾರಿ ಶಬರೀಶ್ ಶೆಟ್ಟಿ ಮಾತನಾಡಿ, ವಿರಾಜಪೇಟೆ ತಾಲ್ಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಕೇಶವ ಭಟ್ ಅಪಾರ ಹಿಂದಿ ಜ್ಞಾನವನ್ನು ಹೊಂದಿದ್ದು, ಸಂತ ಅನ್ನಮ್ಮ ಶಾಲೆಯಲ್ಲಿ ಹಿಂದಿ ಅಧ್ಯಾಪಕರಾಗಿ ವೃತ್ತಿ ಜೀವನ ಪ್ರಾರಂಭಿಸಿದರು. ಸದ್ಗುರು ಅಪ್ಪಯ್ಯ ಸ್ವಾಮಿ ಅವರ ಪ್ರೇರಣೆಯಿಂದ ಪ್ರಭಾವಿತರಾಗಿ ಸನಾತನ ಧರ್ಮ ಎಂಬ ಮೊದಲ ಕೃತಿಯನ್ನು ಪ್ರಕಟಿಸಿದರು. ಉಪನಿಷತ್ತುಗಳಿಗೆ ವ್ಯಾಖ್ಯಾನಗಳನ್ನು ಬರೆಯುತ್ತಿದ್ದರು. ಸರ್ಕಾರಿ ಪದವಿಪೂರ್ವ ಕಾಲೇಜು ವಿರಾಜಪೇಟೆಯಲ್ಲಿ ಕನ್ನಡ ಉಪನ್ಯಾಸಕರಾಗಿ ಕರ್ತವ್ಯವನ್ನು ನಿರ್ವಹಿಸಿದ್ದರು. ಹೀಗೆ ಆಧ್ಯಾತ್ಮ ಸಂತ ರಾಗಿ ನಿಧನರಾಗಿರುವುದು ಸಾಹಿತ್ಯ ಲೋಕಕ್ಕೆ ಅಪಾರ ನಷ್ಟವನ್ನುಂಟು ಮಾಡಿದೆ ಎಂದರು.
ಈ ಸಂದರ್ಭದಲ್ಲಿ ವಿರಾಜಪೇಟೆ ತಾಲೂಕು ಕ.ಸಾ. ಪ. ಅಧ್ಯಕ್ಷ ರಾಜೇಶ್ ಪದ್ಮನಾಭ, ಗೌರವ ಕಾರ್ಯದರ್ಶಿ ಹೆಚ್. ಜಿ.ಸಾವಿತ್ರಿ ಹಾಗೂ ಪಟ್ಟಣ ಪಂಚಾಯತ್ ಸದಸ್ಯರುಗಳಾದ ದೇಚಮ್ಮ, ಪಟ್ಟಡ ರಂಜಿ ಪೂಣಚ್ಚ, ಮತಿನ್ ಮುಂತಾದವರು ಹಾಜರಿದ್ದರು.