ಮಡಿಕೇರಿ ಫೆ.1 : ಕಕ್ಕಬೆ ಸ್ಟೆಪ್ಸ್ ಸಂಸ್ಥೆ ವತಿಯಿಂದ ಪ್ರಥಮ ಬಾರಿಗೆ ಫೆ.26 ರಂದು ಸಾರ್ವಜನಿಕ ಪುರುಷರು ಹಾಗೂ ಮಹಿಳೆಯರಿಗಾಗಿ ರಾಜ್ಯ ಮಟ್ಟದ ನಾಕೌಟ್ ಮಾದರಿಯ CATAPULT (ಕ್ಯಾಟರ್ ಬಿಲ್) ಸ್ಪರ್ಧೆ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಬಿ.ಡಿ.ಸಂತು ಸುಬ್ರಮಣಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಕ್ಕಬೆಯ ಪ್ರೌಢಶಾಲಾ ಮೈದಾನದಲ್ಲಿ ಬೆಳಗ್ಗೆ 10 ಗಂಟೆಗೆ ಪಂದ್ಯಾವಳಿ ಪ್ರಾರಂಭವಾಗಲಿದೆ ಎಂದರು.
18 ವರ್ಷದೊಳಗಿನ ಮಕ್ಕಳು ಹಾಗೂ ಹಿರಿಯರಿಗೆ ಎರಡು ವಿಭಾಗಗಳಲ್ಲಿ ಪಂದ್ಯಾವಳಿ ನಡೆಯಲಿದೆ. ಮೊದಲ ರೌಂಡ್ 10 ಸೆಕೆಂಡಿಗೆ 50 ಅಡಿ ದೂರದ ಗುರಿ ಹೊಂದಿದ್ದು, ಒಬ್ಬರಿಗೆ ಎರಡು ಅವಕಾಶ ನೀಡಲಾಗುವುದು. 2ನೇ ಸುತ್ತಿಗೆ ಆಯ್ಕೆಯಾದವರಿಗೆ ಒಂದೇ ಅವಕಾಶ ನೀಡಲಾಗುವುದೆಂದು ತಿಳಿಸಿದರು.
ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿಜೇತರಿಗೆ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ಲೆನ್ಸ್ ಹಾಗೂ ಲೇಸರ್ ಕ್ಯಾಟರ್ ಬಿಲ್‍ಗಳಿಗೆ ಅವಕಾಶ ಇಲ್ಲ. ಗಾಜಿನ ಗೋಲಿ ಹೊರತುಪಡಿಸಿ ಇತರ ಕ್ಯಾಟರ್ ಬಿಲ್ ಬಾಲ್‍ಗಳಿಗೆ ಅವಕಾಶ ನೀಡಲಾಗುವುದು ಎಂದರು.
ಸ್ಪರ್ಧೆಗೆ ಸುಮಾರು 500ಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಈಗಾಗಲೇ 200ಕ್ಕೂ ಹೆಚ್ಚು ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಆಸಕ್ತರು ಫೆ.26 ರಂದು ಬೆಳಗ್ಗೆ 9 ಗಂಟೆಗೆ ಹಾಜರಿದ್ದು, ರೂ.200 ಪ್ರವೇಶ ಶುಲ್ಕ ಪಾವತಿಸಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದ ಸಂತು ಸುಬ್ರಮಣಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಹೆಚ್ಚಿನ ಮಾಹಿತಿಗೆ 8105278950, 9019561458 ನ್ನು ಸಂಪರ್ಕಿಸಬಹುದಾಗಿದೆ.
ಕ್ಯಾಟರ್ ಬಿಲ್ ಗ್ರಾಮೀಣ ಮಟ್ಟದ ಕ್ರೀಡೆಯಾಗಿದ್ದು, ಪ್ರಸ್ತುತ ದಿನಗಳಲ್ಲಿ ಇವುಗಳನ್ನು ಪ್ರಾಣಿ, ಪಕ್ಷಿಗಳ ಮೇಲೆ ಪ್ರಯೋಗ ಮಾಡಲಾಗುತ್ತಿದೆ. ಇದು ಸರಿಯಾದ ಕ್ರಮವಲ್ಲ, ಪ್ರಾಣಿ ಹಾಗೂ ಪರಿಸರದ ಮೇಲೆ ಕಾಳಜಿ ತೋರುವ ಮೂಲಕ ಇದು ಕ್ರೀಡೆಯಾಗಿ ಬಳಕೆಯಾಗಲಿ ಎಂಬ ಉದ್ದೇಶದಿಂದ ಸ್ಟೆಪ್ಸ್ ಸಂಸ್ಥೆಯಿಂದ ವಿನೂತನ ಪ್ರಯತ್ನ ಮಾಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಕೆ.ಪಿ.ಸಂದೇಶ್ ಕಲ್ಯಾಟಂಡ, ಸದಸ್ಯರಾದ ಎನ್.ಎಸ್.ದಿಲನ್ ಪೊನ್ನಪ್ಪ, ಕೆ.ಕೆ.ರಾಬಿನ್ ಬೋಪಣ್ಣ, ಕೆ.ಎಂ.ಸಜನ್ ಪೂವಯ್ಯ ಹಾಗೂ ಕೆ.ಎನ್.ತರುಣ್ ತಿಮ್ಮಯ್ಯ ಉಪಸ್ಥಿತರಿದ್ದರು.












