ಮಡಿಕೇರಿ ಫೆ.1 : ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿ (ಎಂ.ಐ.ಒ) ಕ್ಯಾನ್ಸರ್ ಸ್ಪೆಷಾಲಿಟಿ ಆಸ್ಪತ್ರೆಯ ಮಡಿಕೇರಿ ಶಾಖೆ ಫೆ.4 ವಿಶ್ವ ಕ್ಯಾನ್ಸರ್ ದಿನದಂದು ಕಾರ್ಯಾರಂಭಗೊಳ್ಳಲಿದೆ ಎಂದು ಮುಖ್ಯಕಾರ್ಯನಿರ್ವಹಕ ಅಧಿಕಾರಿ ಡಾ.ಲಾಲ್ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ವಿವಿಧ ಜಿಲ್ಲೆಗಳ ಕ್ಯಾನ್ಸರ್ ಬಾಧಿತರ ಸೇವೆಗಾಗಿ ಚಿಕ್ಕಮಗಳೂರು, ಉತ್ತರಕನ್ನಡದ ಶಿರಸಿ, ಹೊನ್ನಾವರ, ಉಡುಪಿ ಮೊದಲಾದ ಕಡೆಗಳಲ್ಲಿ ಎಂ.ಐ.ಒ ಕ್ಲಿನಿಕ್‍ಗಳ ಹಿರಿಯ ಕಾನ್ಸರ್ ತಜ್ಞರೇ ಆಗಮಿಸಿ ಕ್ಯಾನ್ಸರ್ ಬಾಧಿತರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.
ಆದರೆ ಕೊಡಗು ಜಿಲ್ಲೆಯ ಕ್ಯಾನ್ಸರ್ ಬಾಧಿತರು ಚಿಕಿತ್ಸೆ ಮತ್ತು ವೈದ್ಯರ ಮರುಭೇಟಿಗಾಗಿ ಮಂಗಳೂರಿಗೆ ಆಗಮಿಸಬೇಕಾಗಿದ್ದು, ಇದರಿಂದ ರೋಗಿಗಳಿಗೆ ಪ್ರಯಾಣ ಮತ್ತು ಹಣಕಾಸಿನ ಸಮಸ್ಯೆ ಎದುರಾಗಲಿದೆ. ಇದನ್ನು ಮನಗಂಡು ಮಡಿಕೇರಿಯ ರವಿ ಆರ್ಥೋಪೆಡಿಕ್ ಸೆಂಟರ್ ನಲ್ಲಿ ಎಂ.ಐ.ಒ ಕ್ಲಿನಿಕ್ ಅಧಿಕೃತವಾಗಿ ಕಾರ್ಯಾರಂಭಗೊಳ್ಳಲಿದೆ ಎಂದರು.
ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್, ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿ ನಿರ್ದೇಶಕ ಡಾ.ಸುರೇಶ್ ರಾವ್, ರವಿ ಆರ್ಥೋಪೆಡಿಕ್ ಸೆಂಟರ್ ನ ನಿರ್ದೇಶಕ ಹಾಗೂ ಆರ್ಥೋಪಡಿಕ್ ಸರ್ಜನ್ ಡಾ.ರವಿ ಅಪ್ಪಾಜಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಪ್ರತಿ ತಿಂಗಳ ಎರಡನೆ ಶುಕ್ರವಾರ ಎಂ.ಐ.ಒ ಹಿರಿಯ ಕ್ಯಾನ್ಸರ್ ತಜ್ಞ ಡಾ.ಸುರೇಶ್ ರಾವ್ ಮತ್ತವರ ತಂಡ ಸಮಾಲೋಚನೆಗೆ ಆಗಮಿಸಲಿದ್ದಾರೆ. ಅಲ್ಲದೆ ಕ್ಯಾನ್ಸರ್ ರೋಗಪತ್ತೆ ಪರೀಕ್ಷೆ, ಕಿಮೋಥೆರಪಿ, ಮರುಭೇಟಿಗೆ ಬರುವ ರೋಗಿಗಳಿಗೆ ಸೂಕ್ತ ಮಾರ್ಗದರ್ಶನದೊಂದಿಗೆ ಚಿಕಿತ್ಸೆ ಲಭ್ಯವಾಗಲಿದೆ.
ಎಕ್ಸರೆ, ಲ್ಯಾಬ್, ಸಿಟಿ ಸ್ಕ್ಯಾನ್ ಪರೀಕ್ಷೆ ಮೊದಲಾದವುಗಳಿಗೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಕ್ಯಾನ್ಸರ್ ದೃಢಪಟ್ಟು ಹೆಚ್ಚಿನ ಚಿಕಿತ್ಸೆಯ ಅಗತ್ಯ ಕಂಡುಬಂದಲ್ಲಿ ಎಂ.ಐ.ಒ ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯಲು ಅನುಕೂಲ ಕಲ್ಪಿಸಲಾಗುವುದು. ಬಡ ರೋಗಿಗಳಿಗೆ ಆಯುಷ್ಮಾನ್ ಯೋಜನೆಯಡಿಯಲ್ಲಿ ಅತ್ಯುತ್ತಮ ಚಿಕಿತ್ಸೆ ನೀಡಲಾಗುತ್ತದೆ. ಸಾರ್ವಜನಿಕರು ಇದರ ಸಂಪೂರ್ಣ ಸದುಪಯೋಗವನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಜೇಶ್ ಶೆಟ್ಟಿ ಉಪಸ್ಥಿತರಿದ್ದರು.











