ಮಡಿಕೇರಿ ಫೆ.1 : ನಗರದ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು.
ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪರ್ಚನೆ ಸಲ್ಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್. ಎಲ್. ದಿವಾಕರ್, ಡಿ.ಎಸ್.ಎಸ್ ನಿಂದ ವಿದ್ಯಾರ್ಥಿಗಳಿಗೆ ಓದುವಿಕೆಗೆ ಸಿಗುವ ಸೌಲಭ್ಯಗಳ ಕುರಿತು ಮಾರ್ಗದರ್ಶನ ನೀಡಿದರು.
ಮಹಿಳಾ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕಿ ಹೆಚ್.ಪಿ.ನಿರ್ಮಲಾ ಮಾತನಾಡಿ, ವಿದ್ಯಾರ್ಥಿನಿಯರಿಗೆ ಸಂವಿಧಾನದ ಮಹತ್ವವನ್ನು ಕುರಿತು ಮಾಹಿತಿ ನೀಡಿದರು. ಸಂವಿಧಾನದ ವಿಧಿ, ಮೂಲಭೂತ ಹಕ್ಕು ಹಾಗೂ ಮೂಲಭೂತ ಕರ್ತವ್ಯವನ್ನು ಕುರಿತು ವಿವರಿಸಿದರು.
ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಸಂಚಾಲಕ ದೀಪಕ್ ಪೊನ್ನಪ್ಪ ಮಾತನಾಡಿ, ಗಣರಾಜ್ಯ ಹಾಗೂ ಸಂವಿಧಾನದ ಪಿತಾಮಹ ಡಾ. ಬಿ. ಆರ್. ಅಂಬೇಡ್ಕರ್ ಅವರ ಕುರಿತು ವಿದ್ಯಾರ್ಥಿನಿಯರಿಗೆ ವಿವರಿಸಿದರು.
ಪತ್ರಕರ್ತ ಚಂದನ್ ನಂದರಬೆಟ್ಟು ಮಾತನಾಡಿ, ಜಾತಿ ವ್ಯವಸ್ಥೆ ನಮ್ಮ ಸಮಾಜದಲ್ಲಿ ಹೇಗೆ ಬೆಳೆದು ಹೆಮ್ಮರವಾಗಿ ನಿಂತಿದೆ, ಜಾತಿಯ ರೇಖೆಯನ್ನು ಮೀರಿ ಸಾಧನೆಯನ್ನು ಮಾಡಬೇಕು. ಪತ್ರಿಕೆಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಸಂವಿಧಾನದ ರಚನೆಯ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು.
ಬಾಲಕಿಯರ ವಸತಿ ನಿಲಯದ ಮೇಲ್ವಿಚಾರಕಿ ಸಿಂಧೂ ಹಾಜರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿನಿಯರಿಂದ ದೇಶ ಭಕ್ತಿ ಗೀತೆಗಳು ಮೊಳಗಿಬಂದವು.