ಕುಶಾಲನಗರ, ಫೆ.1: ಅನ್ಯರಾಜ್ಯಗಳ ಜನರಿಗೆ ಕನ್ನಡ ಭಾಷೆಯನ್ನು ಕಲಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕನ್ನಡ ಕಲಿಕಾ ಕೇಂದ್ರಗಳನ್ನು ಸ್ಥಾಪಿಸುವ ಬಗ್ಗೆ ಚಿಂತನೆ ಹರಿಸಿದರೆ ಒಳಿತು ಎಂದು ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಬಿ.ಆರ್.ನಾರಾಯಣ ಅಭಿಪ್ರಾಯ ವ್ಯಕ್ತಪಡಿಸಿದರು.
ಕುಶಾಲನಗರ ತಾಲೂಕು ಪತ್ರಕರ್ತರ ಸಂಘ ಅವರ ನಿವಾಸದಲ್ಲಿ ಸನ್ಮಾನಿಸಿ ಗೌರವಿಸಿದ ಸಂದರ್ಭ ಮಾತನಾಡಿ, ಜಿಲ್ಲೆಯಲ್ಲಿ ಉತ್ತರ ಭಾರತ ಸೇರಿದಂತೆ ಅನ್ಯರಾಜ್ಯಗಳ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರಿಗೆ ಕನ್ನಡದ ಬಗ್ಗೆ ಅರಿವು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಲಿಕಾ ಕೇಂದ್ರಗಳು ಹೆಚ್ಚಿನ ಪ್ರಾಮುಖ್ಯತೆ ವಹಿಸುತ್ತವೆ ಎಂದರು.
ಹಿರಿಯ ಪತ್ರಕರ್ತರು ಆಗಿರುವ ಬಿ.ಆರ್ ನಾರಾಯಣ ಅವರನ್ನು ತಾಲೂಕು ಸಂಘದ ಅಧ್ಯಕ್ಷರಾದ ಎಂ.ಎನ್.ಚಂದ್ರಮೋಹನ್ ಮತ್ತಿತರರು ಸನ್ಮಾನಿಸಿದರು. ಈ ಸಂದರ್ಭ ಸಂಘದ ಪದಾಧಿಕಾರಿಗಳು, ಸದಸ್ಯರು ಇದ್ದರು.











