ಮಡಿಕೇರಿ ಫೆ.1 : ಎ ರೋಚಾ ಇಂಡಿಯಾದ ಸಂಸ್ಥೆಯು ಸಾರ್ವಜನಿಕ ರಸ್ತೆಗಳಲ್ಲಿ ಕಾಡಾನೆಗಳ ಚಲನವಲನಗಳ ಬಗ್ಗೆ ವಾಹನ ಸವಾರರಿಗೆ ಎಚ್ಚರವಹಿಸಲು ಅರಣ್ಯ ಇಲಾಖೆಯ ಅನುಮತಿಯೊಂದಿಗೆ ‘ಎಲಿಫೆಂಟ್ ಸಿಗ್ನಲ್ ಬೋರ್ಡ್’ ಎಂಬ ನೂತನ ತಂತ್ರಜ್ಞಾನವನ್ನು ಅಳವಡಿಸಿದೆ.
ಹಲವು ವರ್ಷಗಳ ಆನೆ-ಮಾನವ ಸಂಘರ್ಷದಿಂದ ಕಾಡಾನೆ ನಿಯಂತ್ರಣಕ್ಕೆ ಕಾಡಾನೆ ಹಿಡಿಯುವ ಕಾರ್ಯಾಚರಣೆ, ವಿದ್ಯುತ್ ಬೇಲಿ, ರೈಲ್ವೇ ಬ್ಯಾರಿಕೇಡ್ ಅಳವಡಿಕೆ, ಆನೆಗೇಟ್, ಕಾಡಾನೆಗಳಿಗೆ ರೇಡಿಯೋ ಕಾಲರ್, ಆರ್‍ಆರ್‍ಟಿ ತಂಡದಿಂದ ಕಾಡಾನೆಗಳ ಕಣ್ಗಾವಲು ಸೇರಿದಂತೆ ಹಲವು ಕಾಡಾನೆ ನಿಯಂತ್ರಣ ಕಾರ್ಯಗಳು ನಡೆಯುತ್ತಲೇ ಇವೆ.
2021ರಲ್ಲಿ ಮೊದಲ ಬಾರಿಗೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಕಾಡಾನೆಗಳ ನಿರಂತರ ಚಲನೆ ಇರುವ ಕಗ್ಗಲಿಪುರದ ಮೂರು ದಾರಿಗಳಲ್ಲಿ ಸ್ಮಾರ್ಟ್‍ಲೇಜರ್ ಬೇಲಿಗಳನ್ನು ಅಳವಡಿಸಿ ಕಾಡಾನೆಗಳು ದಾಟಿದೊಡನೆ ‘ಸಿಗ್ನಲ್’ ನೀಡುವ ‘ಎಲಿಫೆಂಟ್ ಸಿಗ್ನಲ್ ಬೋರ್ಡ್’ ಅಳವಡಿಸಿ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಕಾಡಾನೆಗಳ ಇರುವಿಕೆಯ ಬಗ್ಗೆ ಮುನ್ನೆಚ್ಚರಿಕಾ ಮಾಹಿತಿ ನೀಡುತ್ತದೆ. ಜೊತೆಗೆ ಈ ತಂತ್ರಜ್ಞಾನದಲ್ಲಿ ಮೊಬೈಲ್ ಸಿಮ್ ಅಳವಡಿಸಿರುವುದರಿಂದ ತಕ್ಷಣವೇ ಸಂಬಂಧಪಟ್ಟ ಅರಣ್ಯ ಅಧಿಕಾರಿ ಮೊಬೈಲ್‍ಗೆ ಕಾಡಾನೆ ಇರುವಿಕೆಯ ಬಗ್ಗೆ ಮಾಹಿತಿ ರವಾನೆಯಾಗುತ್ತದೆ.
ಈ ತಂತ್ರಜ್ಞಾನ ಫಲಕಾರಿಯಾದರಿಂದ ಕೊಡಗಿನ ಅರಣ್ಯದಂಚಿನಲ್ಲಿ ‘ಸಿಗ್ನಲ್ ಬೋರ್ಡ್’ ಅಳವಡಿಸಲು ಅರಣ್ಯ ಇಲಾಖೆಯ ಅನುಮತಿ ಪಡೆದಿದೆ.
ಕಳೆದ 20 ದಿನಗಳ ಹಿಂದೆ ಎ ರೋಚಾ ಇಂಡಿಯಾ ಎಂಬ ಎನ್‍ಜಿಓ ಸಂಸ್ಥೆಯು ಕೊಡಗಿನ ಮೀನುಕೊಲ್ಲಿ ಹಾಗೂ ಆನೆಕಾಡು ಮೀಸಲು ಅರಣ್ಯ ಬದಿಯ ಕಾಡಾನೆಗಳ ನಿರಂತರ ಓಡಾಟವಿರುವ 5 ಕಡೆಗಳಲ್ಲಿ ಕಾಡಾನೆ ಪತ್ತೆ ಹಚ್ಚುವ ನೂತನ ತಂತ್ರಜ್ಞಾನವನ್ನು ಅಳವಡಿಸಿದೆ.
ಕಾಡಾನೆ ದಾಟುವ ಜಾಗದಲ್ಲಿ ಎರಡು ಕಡೆ ಕಬ್ಬಿಣದ ಕಂಬಗಳನ್ನು ಅಳವಡಿಸಿ ಸಣ್ಣಗಿನ ಸೋಲಾರ್ ವಿದ್ಯುತ್ ಪ್ಯಾನಲ್‍ಗಳನ್ನು ಅಳವಡಿಸಿ ಇನ್‍ಫಾರೆಡ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಕಾಡಾನೆಗಳು ದಾಟಿದೊಡನೆ ರಸ್ತೆಬದಿಯಲ್ಲಿ ಅಳವಡಿಸಿರುವ ಸಿಗ್ನಲ್ ಬೋರ್ಡ್ ಉರಿಯುತ್ತದೆ. ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಮುನ್ನೆಚ್ಚರಿಕೆಯಿಂದ ತೆರಳಲು ಅನುಕೂಲವಾಗುತ್ತದೆ. ಜೊತೆಗೆ ಸಂಬಂಧಪಟ್ಟ ಅರಣ್ಯ ಅಧಿಕಾರಿಗಳಿಗೂ ಕಾಡಾನೆಗಳ ಚಲನವಲನದ ಮಾಹಿತಿ ರವಾನೆಯಾಗುತ್ತದೆ. ಅಲ್ಲದೆ ಕಾಡಾನೆಗಳ ಸುರಕ್ಷತೆಗೂ ಈ ತಂತ್ರಜ್ಞಾನ ಫಲಕಾರಿಯಾಗಿದೆ. ಈ ತಂತ್ರಜ್ಞಾನ ಫಲಕಾರಿಯಾದರೆ ಇನ್ನಷ್ಟು ಕಡೆಗಳಲ್ಲಿ ‘ಎಲಿಫೆಂಟ್ ಸಿಗ್ನಲ್ ಬೋರ್ಡ್’ಗಳನ್ನು ಅಳವಡಿಸುವ ಬಗ್ಗೆ ಎ ರೋಚಾ ಇಂಡಿಯಾ ಸಂಸ್ಥೆಯ ಮೇಲ್ವಿಚಾರಕರು ಹೇಳುತ್ತಾರೆ.
ವರದಿ : ಪುತ್ತರಿರ ಕರುಣ್ ಕಾಳಯ್ಯ