ಮಡಿಕೇರಿ ಫೆ.1 : ನವ ದೆಹಲಿಯ ರಾಷ್ಟ್ರೀಯ ರಕ್ಷಣಾ ಕಾಲೇಜಿನ ನಿಯೋಗವು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಜಿ.ಪಂ.ಸಿಇಒ ಡಾ.ಎಸ್.ಆಕಾಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರನ್ನು ಭೇಟಿ ಮಾಡಿ, ಕೊಡಗು ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಂವಾದ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಮಾಹಿತಿ ನೀಡಿ, ಕೊಡಗು ಜಿಲ್ಲೆಯು 5 ತಾಲ್ಲೂಕು, 16 ಹೋಬಳಿ, 103 ಗ್ರಾಮ ಪಂಚಾಯಿತಿ, 531 ಕಂದಾಯ ಗ್ರಾಮಗಳನ್ನು ಒಳಗೊಂಡಿದ್ದು, 6.13 ಲಕ್ಷ ಜನಸಂಖ್ಯೆ ಹೊಂದಿದೆ ಎಂದು ತಿಳಿಸಿದರು.
16 ಹೋಬಳಿ ಕೇಂದ್ರಗಳಲ್ಲಿ ಅಟಲ್ ಜೀ ಜನಸ್ನೇಹಿ ಹಾಗೂ ಸ್ಪಂದನಾ ಕೇಂದ್ರಗಳ ಮೂಲಕ ಆಧಾರ್, ಭೂಮಿ, ಮತ್ತಿತರ ಸೇವೆಗಳನ್ನು ಕಲ್ಪಿಸಲಾಗುತ್ತಿದೆ. ಬೆಳೆಹಾನಿ ಸಂಬಂಧಿಸಿದಂತೆ ಪ್ರಸಕ್ತ ಸಾಲಿನಲ್ಲಿ 46,099 ಫಲಾನುಭವಿಗಳಿಗೆ 133.26 ಕೋಟಿ ರೂ. ವಿತರಿಸಲಾಗಿದೆ ಎಂದರು.
ಗ್ರಾಮ ಒನ್ ಸೇವೆಗಳು ಗ್ರಾ.ಪಂ. ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಸಕಾಲ ಯೋಜನೆಯಡಿ ಹಲವು ಸೇವೆಗಳನ್ನು ಕಾಲ ಮಿತಿಯಲ್ಲಿ ಒದಗಿಸಲಾಗುತ್ತಿದೆ ಎಂದರು.
ಮುಂಗಾರು ಸಂದರ್ಭದಲ್ಲಿ ಪ್ರಾಕೃತಿಕ ವಿಕೋಪ ಎದುರಿಸುವುದು, ಜಿಲ್ಲೆಯಲ್ಲಿನ ಪ್ರವಾಸಿ ಸ್ಥಳಗಳು, ಮತ್ತಿತರ ಬಗ್ಗೆ ಜಿಲ್ಲಾಧಿಕಾರಿ ಬಿ.ಸಿ.ಸತೀಶ ಅವರು ವಿವರವಾಗಿ ಮಾಹಿತಿ ನೀಡಿದರು.
ಜಿ.ಪಂ.ಸಿಇಒ ಡಾ.ಎಸ್.ಆಕಾಶ್ ಅವರು ಸ್ವಚ್ಚ ಭಾರತ ಅಭಿಯಾನದಡಿ ಸಮರ್ಪಕವಾಗಿ ಘನ ತ್ಯಾಜ್ಯ ವಿಲೇವಾರಿ ಮಾಡುವುದು, ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ನಲ್ಲಿ ನೀರು ಸಂಪರ್ಕ ಕಲ್ಪಿಸುವುದು, ಪ್ರತೀ ಗ್ರಾ.ಪಂ. ವ್ಯಾಪ್ತಿಯಲ್ಲಿ ಡಿಜಿಟಲ್ ಗ್ರಂಥಾಲಯ ಯೋಜನೆಯಡಿ ‘ಓದುವ ಬೆಳಕು’ ಕಾರ್ಯಕ್ರಮ ಅನುಷ್ಠಾನ, ಇ-ಸ್ವತ್ತು ಮತ್ತಿತರ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಪೊಲೀಸ್ ಇಲಾಖೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು, ರಕ್ಷಣೆಗೆ ಒತ್ತು ನೀಡುವುದು, ರಸ್ತೆ ಸುರಕ್ಷತೆ, ಸುಗಮ ಸಾರಿಗೆ ಸಂಚಾರ ಮತ್ತಿತರ ಕಾರ್ಯ ಕೈಗೊಳ್ಳಲಾಗುತ್ತದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಎನ್.ಮಂಜುನಾಥ್ ಅವರು ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಡಿ ಗರ್ಭಿಣಿಯರಿಗೆ ಸಹಾಯಧನದಡಿ ಇದುವರೆಗೆ 14,607 ಫಲಾನುಭವಿಗಳಿಗೆ 637.42 ಲಕ್ಷ ರೂ. ಭರಿಸಲಾಗಿದೆ. ಪೋಷಣಾ ಅಭಿಯಾನ ಯೋಜನೆಯಡಿ ಪೌಷ್ಟಿಕ ಆಹಾರ ವಿತರಣೆ, ಪೋಷಣೆ ಮಾಸಾಚರಣೆ ಚಟುವಟಿಕೆಯಡಿ ಅರಿವು ಮೂಡಿಸಲಾಗುತ್ತದೆ ಎಂದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಶಬಾನಾ ಎಂ.ಶೇಖ್ ಅವರು ಫ್ರೂಟ್ಸ್ ತಂತ್ರಾಂಶದ ಮೂಲಕ ಕೃಷಿ ಮತ್ತು ಸಂಬಂಧಿಸಿದ ಇಲಾಖೆಗಳ ವಿವಿಧ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದರು. .
ಸೈನಿಕ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಬಾಲಸುಬ್ರಮಣ್ಯಂ ಅವರು ಜಿಲ್ಲೆಯಲ್ಲಿ ನೋಂದಾಯಿತ 4,527 ನಿವೃತ್ತ ಸೈನಿಕರಿದ್ದಾರೆ ಎಂದು ತಿಳಿಸಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಮಧುರ ಅವರು ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ‘ಸಾರಥಿ’ ಯೋಜನೆಯಡಿ ಸಾರ್ವಜನಿಕರಿಗೆ ಹಲವು ಸೇವೆ ಕಲ್ಪಿಸಲಾಗುತ್ತದೆ ಎಂದರು.
ಮುದ್ರಾಂಕ ಮತ್ತು ನೋಂದಣಿ ಇಲಾಖೆಯ ಸಬ್ ರಿಜಿಸ್ಟ್ರಾರ್ ಸೌಮ್ಯಲತಾ ಇಲಾಖೆಯಿಂದ ಕಾವೇರಿ ಸಾಪ್ಟ್‍ವೇರ್ ಮೂಲಕ ಆಸ್ತಿ ನೋಂದಣಿ, ವಿವಿಧ ಸಂಘ ಸಂಸ್ಥೆಗಳ ನೋಂದಣಿ, ಮದುವೆ ರಿಜಿಸ್ಟ್ರೇಷನ್ ಇತರೆ ಕಾರ್ಯಗಳನ್ನು ಮಾಡಲಾಗುತ್ತದೆ ಎಂದರು.
ಸರ್ಕಾರದ ವಿವಿಧ ಇಲಾಖೆಗಳ ಅಭಿವೃದ್ಧಿ ಮತ್ತು ಪ್ರಗತಿಯ ಬಗ್ಗೆ ಮಾಹಿತಿ ಪಡೆದು ಮಾತನಾಡಿದ ಏರ್‍ವೈಸ್ ಮಾರ್ಷಲ್ ತೇಜ್‍ಬೀರ್ ಸಿಂಗ್, ಎವಿಎಸ್‍ಎಂ ಅವರು ರಾಷ್ಟ್ರೀಯ ರಕ್ಷಣೆ ಮತ್ತು ಶೈಕ್ಷಣಿಕ ಅಧ್ಯಯನ ಸಂಬಂಧಿಸಿದಂತೆ ರಕ್ಷಣೆ, ಸಿವಿಲ್ ಸೇವೆಗಳು ಸೇರಿದಂತೆ ಹಲವು ರಾಜ್ಯಗಳ ಪ್ರವಾಸ ಕೈಗೊಂಡು ಆರ್ಥಿಕ ಹಾಗೂ ಗ್ರಾಮೀಣ ಅಭಿವೃದ್ಧಿ, ಮಾಹಿತಿ ತಂತ್ರಜ್ಞಾನ ಮತ್ತಿತರ ಪ್ರಗತಿ ಸಂಬಂಧಿಸಿದಂತೆ ಮಾಹಿತಿ ಪಡೆಯುವುದು ನಿಯೋಗದ ಉದ್ದೇಶವಾಗಿದೆ. ಆ ನಿಟ್ಟಿನಲ್ಲಿ ಜಿಲ್ಲಾಡಳಿತ ಎಲ್ಲಾ ರೀತಿಯ ಅಗತ್ಯ ಸಹಕಾರ ನೀಡಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂವಾದದಲ್ಲಿ ಗ್ರಾಮೀಣ ಅಭಿವೃದ್ಧಿ, ಸ್ವಚ್ಚತೆ, ಶೈಕ್ಷಣಿಕ ಚಟುವಟಿಕೆ, ಘನ ತ್ಯಾಜ್ಯ ಸಮರ್ಪಕ ವಿಲೇವಾರಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನ, ಪ್ರವಾಸೋದ್ಯಮ ಅಭಿವೃದ್ಧಿ ಹೀಗೆ ಹಲವು ವಿಚಾರಗಳ ಬಗ್ಗೆ ಮಾಹಿತಿ ಪಡೆದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ.ಕಾರ್ಯಪ್ಪ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ, ಭೂದಾಖಲೆಗಳ ಉಪ ನಿರ್ದೇಶಕರಾದ ಪಿ.ಶ್ರೀನಿವಾಸ್, ಕೆಪಿಟಿಸಿಎಲ್ ಇಇ ಮಾದೇಶ್, ಸೆಸ್ಕ್ ಇಇ ಅನಿತಾ ಬಾಯಿ ಇತರರು ತಮ್ಮ ಇಲಾಖೆಯ ಕಾರ್ಯ ಚಟುವಟಿಕೆ ಬಗ್ಗೆ ಮಾಹಿತಿ ನೀಡಿದರು.
18 ಜನರನ್ನು ಒಳಗೊಂಡ ರಾಷ್ಟ್ರೀಯ ರಕ್ಷಣಾ ಕಾಲೇಜಿನ ನಿಯೋಗವು ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನ, ಕೋಟೆ, ರಾಜಸೀಟು ಮತ್ತಿತರ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು.










