ಮಡಿಕೇರಿ ಫೆ.1 : ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನಕ್ಕೆ ರಾಷ್ಟ್ರೀಯ ಡಿಫೆನ್ಸ್ ಕಾಲೇಜಿನ ಪ್ರಮುಖರು ಭೇಟಿ ನೀಡಿ ವೀರಸೇನಾನಿ ಜನರಲ್ ತಿಮ್ಮಯ್ಯ ಜೀವನ ಮತ್ತು ಸೇನಾ ಸಾಧನೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಏರ್ ವೈಸ್ ಮಾರ್ಷಲ್ ತೇಜ್ ಬೀರ್ ಸಿಂಗ್ ಎವಿಎಸ್‍ಎಂ, ವಿಎಂ ಎಸ್‍ಡಿಎಸ್, (ಎಐಆರ್) ಎನ್‍ಡಿಸಿ ನೇತೃತ್ವದಲ್ಲಿ 18 ಪ್ರಮುಖರು ತಿಮ್ಮಯ್ಯ ಸ್ಮಾರಕ ಭವನಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ಜನರಲ್ ತಿಮ್ಮಯ್ಯ ಅವರ ಸೇನಾ ಸಾಧನೆಯ ಬಗ್ಗೆ ಸಮಗ್ರ ಚಿತ್ರಣ ನೀಡುವ ಸ್ಮಾರಕ ಭವನವನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡಲಾಗಿದ್ದು, ಪ್ರತಿಯೊಬ್ಬ ಭಾರತೀಯನೂ ವೀರ ಸೇನಾನಿಯ ಸಾಧನೆಯ ಬಗ್ಗೆ ತಿಳಿದುಕೊಳ್ಳಲು ತಿಮ್ಮಯ್ಯ ಸ್ಮಾರಕ ಭವನಕ್ಕೆ ಭೇಟಿ ನೀಡುವಂತಾಗಬೇಕು ಎಂದರು.
ಭವಿಷ್ಯದ ಸೇನಾ ನಾಯಕರಿಗೆ ತಿಮ್ಮಯ್ಯ ಸ್ಮಾರಕ ಭವನ ಮಾರ್ಗದರ್ಶನ ನೀಡುವಂತಿದೆ. ಜನರಲ್ ತಿಮ್ಮಯ್ಯ ಭಾರತೀಯ ಸೇನೆಯನ್ನು ಮುನ್ನಡೆಸಿದ ರೀತಿಯೂ, ಈಗಿನ ಸೈನಿಕರಿಗೆ ಪ್ರೇರಣೆ ನೀಡುವಂತಿದೆ ಎಂದು ಏರ್‍ವೈಸ್ ಮಾರ್ಷಲ್ ತೇಜ್ ಬೀರ್ ಸಿಂಗ್ ಅಭಿಪ್ರಾಯಪಟ್ಟರು.
ತಿಮ್ಮಯ್ಯ ಸೇನಾ ಜೀವನದ ಬಗ್ಗೆ ಸ್ಮಾರಕ ಭವನದ ವ್ಯವಸ್ಥಾಪಕ ಸುಬೇದಾರ್ ಮೇಜರ್ ಗೌಡಂಡ ತಿಮ್ಮಯ್ಯ ನಿಯೋಗಕ್ಕೆ ಮಾಹಿತಿ ನೀಡಿದರು. ಸೈನಿಕ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಮೇಜರ್ ಬಾಲಸುಬ್ರಹ್ಮಣ್ಯಂ ಅವರು ಹಾಜರಿದ್ದರು.
ರಾಷ್ಟ್ರೀಯ ಡಿಫೆನ್ಸ್ ಕಾಲೇಜು ನವದೆಹಲಿಯಲ್ಲಿದ್ದು ಅನೇಕ ವಿದೇಶಿ ಪ್ರತಿನಿಧಿಗಳೂ ಕೇಂದ್ರದಲ್ಲಿ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.











