ಮಡಿಕೇರಿ ಫೆ.2 : ಜಾಗತಿಕ ಅಹ್ಮದಿಯಾ ಮುಸ್ಲಿಮ್ ಸಂಘಟನೆಯ ಮಹಿಳಾ ಘಟಕ “ಲಜ್ನಾ ಇಮಾಇಲ್ಲಾಹ್” ಇದರ ನೂರರ ಸಂಭ್ರಮಾಚರಣೆ ಪ್ರಯುಕ್ತ ಮಡಿಕೇರಿಯ ಬಾಲಭವನದಲ್ಲಿ ಸರ್ವಧರ್ಮ ಸಮ್ಮೇಳನ ನಡೆಯಿತು.
ಅಹ್ಮದಿಯಾ ಮುಸ್ಲಿಮ್ ಸಂಘಟನೆಯ ಕರ್ಣಾಟಕ ದಕ್ಷಿಣ ವಲಯದ ಮಹಿಳಾ ಘಟಕದ ಅಧ್ಯಕ್ಷೆ ನಸೀಮಾ ನಾಸಿರ್ ಸರ್ವಧರ್ಮ ಸಮ್ಮೇಳನದ ಕುರಿತು ಪ್ರಸ್ತಾವಿಕವಾಗಿ ಮಾತನಾಡಿದರು.
ನಗರಸಭೆಯ ಅಧ್ಯಕ್ಷರಾದ ಅನಿತಾ ಪೂವಯ್ಯ ಮಾತನಾಡಿ, ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಮುನ್ನುಗ್ಗುತ್ತಿದ್ದು, ಸದಾ ಉತ್ತಮ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಬ್ರಹ್ಮಕುಮಾರಿ ಮಡಿಕೇರಿ ಶಾಖೆಯ ಧನಲಕ್ಷ್ಮಿ ಮಾತನಾಡಿ, ಎಲ್ಲಾ ಧರ್ಮದ ಮೂಲ ತತ್ವವಾದ ಶಾಂತಿಯು ಮನಸ್ಸಿಗೆ ಎಷ್ಟು ಮುಖ್ಯ, ಅದು ಹೇಗೆ ಪಡೆಯಲು ಸಾಧ್ಯ ಎಂದು ವಿವರಿಸಿದರು.
ಸಂತ ಜೋಸೆಫರ ಶಾಲೆಯ ಸಿಸ್ಟರ್ ಅಸುಮ್ತಾ.ಕೆ, ಮಾತನಾಡಿ, ಶಾಂತ ಗುಣಗಳು ಪ್ರತಿಯೊಬ್ಬರಿಗೂ ಯಾವರೀತಿ ಪ್ರಮುಖವಾದದ್ದು ಎಂದು ಹೇಳುತ್ತಾ, ಆ ಗುಣಗಳ ಪ್ರಾಮುಖ್ಯತೆಯನ್ನು ತಿಳಿಸಿದರು.
ಸ್ತ್ರೀ ಶಕ್ತಿ ಸಂಘದ ರಾಜ್ಯಾಧ್ಯಕ್ಷೆ ರೆಹೆನಾ ಸುಲ್ತಾನ ಮಾತನಾಡಿ, ಸೇವಾ ಕಾರ್ಯಗಳನ್ನು ನಮ್ಮೆಲ್ಲರ ಹವ್ಯಾಸವಾಗಿ ಮಾಡಿಕೊಳ್ಳಬೇಕೆಂದು ತಿಳಿಸಿದರು.
ವಕೀಲರಾದ ಮೀನಕುಮಾರಿ ಮಾತನಾಡಿ, ಹಲವಾರು ಧರ್ಮ, ನೂರಾರು ವಿಶ್ವಾಸಾಭಿಪ್ರಾಯ ವಿದ್ದರೂ , ನಮ್ಮ ಮೂಲ ಉದ್ದೇಶ ಮಾನವ ಕಲ್ಯಾಣ ಎಂಬುದನ್ನು ವಿವರಿಸಿದರು.
ಸದಸ್ಯರಾದ ಡಾ.ಅಫ್ರಿನ್ ಮಾತನಾಡಿ, ಧರ್ಮದ ಸಾಮರಸ್ಯದ ಬಗ್ಗೆ, ಧರ್ಮ ಎಂದಿಗೂ ವಿಶ್ವದಲ್ಲಿ ಶಾಂತಿಭಂಗ ಮಾಡಲು ಕಾರಣವಾಗಬಾರದು, ಅದರ ಹೊಣೆ ನಮ್ಮೆಲ್ಲರ ಕೈಯಲ್ಲಿದೆ ಎಂದು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅಹ್ಮದಿಯಾ ಸಂಘಟನೆಯ ಮಹಿಳಾ ಘಟಕದ ಅಧ್ಯಕ್ಷೆ ರೂಮಾನ್ ರಿಜ಼್ವಾನ್, ಇಸ್ಲಾಮಿನಲ್ಲಿ ಮಹಿಳೆಯರ ಸ್ಥಾನಮಾನದ ಕುರಿತು ವಿವರಿಸಿದರು.
ಖುರ್ ಆನ್ ಪಾರಾಯಣ ದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಸಂಘಟನೆಯ ಉದ್ದೇಶ ಮತ್ತು ಕಾರ್ಯಗಳ ವರದಿಯನ್ನು ಡಾಕ್ಯುಮೆಂಟರಿಯ ಮೂಲಕ ತೋರಿಸಲಾಯಿತು.
ಸಮಾರಂಭದಲ್ಲಿ ಮಹಿಳೆಯರು ಮತ್ತು ಮಕ್ಕಳು ಪಾಲ್ಗೊಂಡಿದ್ದರು.