ಮಡಿಕೇರಿ NEWS DESK ಫೆ.10 : ವಿರಾಜಪೇಟೆ ತಾಲ್ಲೂಕಿನ ಕಂಡಂಗಾಲ ಗ್ರಾಮದಲ್ಲಿ ಇದೇ ಪ್ರಥಮ ಬಾರಿಗೆ ಏ.2ರಿಂದ 4ರವರೆಗೆ ಕೊಡವ ಕುಟುಂಬಗಳ ನಡುವಣ “ಮುಲ್ಲೇಂಗಡ ಕಬಡ್ಡಿ ನಮ್ಮೆ”ಯನ್ನು ಆಯೋಜಿಸಲಾಗಿದೆ ಎಂದು ನಮ್ಮೆಯ ಸಂಚಾಲಕ ಮುಲ್ಲೇಂಗಡ ಮಧೋಶ್ ಪೂವಯ್ಯ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಕಂಡಂಗಾಲ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ, ಕರ್ನಾಟಕ ಕಬಡ್ಡಿ ಫೆಡರೇಷನ್ ನಿಯಮಾವಳಿಯಂತೆ ಮ್ಯಾಟ್ ಕಬಡ್ಡಿ ಪಂದ್ಯಾವಳಿ ನಡೆಯಲಿದ್ದು, ಸುಮಾರು 50 ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು. ಕಂಡಂಗಾಲ ಶಾಲಾ ಮೈದಾನದಲ್ಲಿ ಅಳವಡಿಸುವ ಮೂರು ಮ್ಯಾಟ್‌ಗಳಲ್ಲಿ ನಾಕ್ ಔಟ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ. ಪ್ರತಿನಿತ್ಯ ಸುಮಾರು 15ರಿಂದ 20 ಪಂದ್ಯಗಳು ನಡೆಯಲಿದ್ದು, ಪಂದ್ಯಾವಳಿಯ ತಾಂತ್ರಿಕ ಸಮಿತಿಯಲ್ಲಿ ಕಬಡ್ಡಿ ಫೆಡರೇಷನ್‌ನ ತೀರ್ಪುಗಾರರು ಇರುತ್ತಾರೆ. ಕಬಡ್ಡಿ ಕ್ರೀಡೆಯನ್ನು ಉತ್ತೇಜಿಸುವ ಉದ್ದೇಶದಿಂದ ಪಂದ್ಯಾವಳಿಗೆ ಹೆಸರು ನೋಂದಾಯಿಸಿಕೊಳ್ಳುವ ಮೊದಲ ಹತ್ತು ತಂಡಗಳಿಗೆ ವಿಶೇಷ ನೆನಪಿನ ಕಾಣಿಕೆಯನ್ನು ನೀಡಲಾಗುತ್ತದೆ. ಪಂದ್ಯಾವಳಿಗೆ ಬಾಳೆಲೆಯ ಮಾಚಂಗಡ ತಂಡ ಪ್ರಥಮ ತಂಡವಾಗಿ ಮತ್ತು ಬಲ್ಯಮಂಡೂರುವಿನ ದೇಯಂಡ ತಂಡ ದ್ವಿತೀಯ ತಂಡವಾಗಿ ಈಗಾಗಲೆ ಹೆಸರನ್ನು ನೋಂದಾಯಿಸಿಕೊಂಡಿವೆ. ಆಸಕ್ತ ಕೊಡವ ಕುಟುಂಬಗಳು ಹತ್ತು ಆಟಗಾರರನ್ನು ಒಳಗೊಂಡ ತಮ್ಮ ತಂಡದ ಹೆಸರನ್ನು 1300 ರೂ. ಪ್ರವೇಶ ಶುಲ್ಕದೊಂದಿಗೆ ಮಾ.15ರ ಒಳಗಾಗಿ ನೋಂದಾಯಿಸಿಕೊಳ್ಳಬೇಕೆಂದು ಮನವಿ ಮಾಡಿದರು. ತಂಡಗಳ ನೋಂದಣಿಗೆ ಮಡಿಕೇರಿಯಲ್ಲಿ ಚೊಟ್ಟೆಯಂಡ ಸಂಜು ಕಾವೇರಪ್ಪ ಮೊ.9742728805, ಮೂರ್ನಾಡಿನಲ್ಲಿ ತೇಲಪಂಡ ಸುಬ್ಬಯ್ಯ ಮೊ.9591871957, ನಾಪೋಕ್ಲುವಿನಲ್ಲಿ ಶಿವಚಾಳಿಯಂಡ ಅಂಬಿ ಮೊ. 9448647337, ವಿರಾಜಪೇಟೆಯಲ್ಲಿ ತೂಕ್ ಬೊಳಕ್ ಪತ್ರಿಕಾ ಕಾರ್ಯಾಲಯ, ಮೂರ್ನಾಡು ರಸ್ತೆ, ವಿರಾಜಪೇಟೆ, ಪೊನ್ನಂಪೇಟೆಯಲ್ಲಿ ಐನಂಡ ಕೆ.ಬೋಪಣ್ಣ ಮೊ.9448607699, ದೇಯಂಡ ಸಂತೋಷ್ ಮೊ.8762694335, ಟಿ.ಶೆಟ್ಟಿಗೇರಿಯಲ್ಲಿ ಚೆಟ್ಟಂಗಡ ರವಿ ಸುಬ್ಬಯ್ಯ ಮೊ. 9880584732 ಇವರುಗಳನ್ನು ಸಂಪರ್ಕಿಸಬಹುದೆಂದು ತಿಳಿಸಿದರು. ಪಂದ್ಯಾವಳಿ ವಿಜೇತ ತಂಡಕ್ಕೆ 30 ಸಾವಿರ ರೂ. ನಗದು ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ 20 ಸಾವಿರ ರೂ.ನಗದು ಮತ್ತು ಆಕರ್ಷಕ ಟ್ರೋಫಿಯನ್ನು ಬಹುಮಾನವಾಗಿ ನೀಡಲಾಗುತ್ತದೆ. ಒಟ್ಟು ಪಂದ್ಯಾವಳಿಯನ್ನು ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ಆಯೋಜಿಸುತ್ತಿರುವುದಾಗಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮುಲ್ಲೇಂಗಡ ಕುಟುಂಬದ ಅಧ್ಯಕ್ಷರಾದ ಮುಲ್ಲೇಂಗಡ ಶಂಕರಿ ಪೊನ್ನಪ್ಪ, ಕ್ರೀಡಾ ನಿರ್ದೇಶಕರಾದ ಮುಲ್ಲೇಂಗಡ ರಘು ದೇವಯ್ಯ ಉಪಸ್ಥಿತರಿದ್ದರು.








