ಮಡಿಕೇರಿ NEWS DESK ಫೆ.10 : ಆರೋಗ್ಯ ರಕ್ಷಣೆೆ ಎನ್ನುವುದು ಕೇವಲ ಯೋಜನೆಯಾಗದೆ, ಪ್ರತಿಯೊಬ್ಬರ ಮೂಲಭೂತ ಹಕ್ಕಾಗಬೇಕು ಎನ್ನುವ ಪ್ರಮುಖ ವಿಷಯವನ್ನು ಮುಂದಿಟ್ಟುಕೊಂಡು ಬುಡಕಟ್ಟು ಕಾರ್ಮಿಕರ ಸಂಘ ಮತ್ತು ಚಿಂತಾಮಣಿಯ ಬೇರು ಬೆವರು ಸಾಂಸ್ಕೃತಿಕ ವೇದಿಕೆ ಮಡಿಕೇರಿಯಲ್ಲಿ “ಆರೋಗ್ಯ ಹಕ್ಕಿನ ಜಾಥಾ”ವನ್ನು ನಡೆಸಿತು.
ರಾಜ್ಯದಲ್ಲಿ ಆರೋಗ್ಯ ಹಕ್ಕಿನ ಕಾಯ್ದೆಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿದ ಪ್ರಮುಖರು ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರ ಮೂಲಕ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೇರು ಬೆವರು ಸಾಂಸ್ಕೃತಿಕ ವೇದಿಕೆಯ ಸಂಚಾಲಕ ಸೌರಭ್ ಪಲ್ಲಿ ಚಂದ್ರಶೇಖರ್ ಆರೋಗ್ಯ ಹಕ್ಕಿನ ಜಾಥಾವನ್ನು ಇದೇ ಫೆ.2ರಂದು ಆರಂಭಿಸಲಾಗಿದ್ದು, ಈಗಾಗಲೆ 12 ಜಿಲ್ಲೆಗಳಲ್ಲಿ ಪೂರ್ಣಗೊಳಿಸಲಾಗಿದೆ. ಇಂದು ಕೊಡಗು ಜಿಲ್ಲಾ ಬುಡಕಟ್ಟು ಕಾರ್ಮಿಕರ ಸಂಘಟನೆಯೊಂದಿಗೆ ನಗರದಲ್ಲಿ ಜಾಥಾ ನಡೆಸಿದ್ದು, ಅಭಿಯಾನದ ಸಮಾರೋಪ ಫೆ.17 ರಂದು ಬೆಂಗಳೂರಿನಲ್ಲಿ ನಡೆಯಲಿದೆ ಎಂದರು.
ಸAವಿಧಾನದ ಮೂಲಭೂತ ಹಕ್ಕುಗಳಲ್ಲಿ ಎಲ್ಲರಿಗೂ ಜೀವಿಸುವ ಹಕ್ಕನ್ನು ಒದಗಿಸಲಾಗಿದೆ. ಜೀವಿಸುವುದು ಎಂದರೆ ಆರೋಗ್ಯಯುತವಾದ ಬದುಕೆ ಆಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯವೆನ್ನುವುದು ಕೇವಲ ಯೋಜನೆಗಳಿಗೆ ಸೀಮಿತವಾಗಕೂಡದು, ನೆರೆಯ ತಮಿಳುನಾಡು, ಕೇರಳ, ರಾಜಸ್ಥಾನಗಳಲ್ಲಿ ಇರುವಂತೆಯೇ ಕರ್ನಾಟಕದ ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಸರ್ವರಿಗೂ ಉಚಿತ ಮತ್ತು ಗುಣಮಟ್ಟದ ಔಷಧಗಳು ದೊರಕಬೇಕೆನ್ನುವುದು ನಮ್ಮ ಹಕ್ಕೊತ್ತಾಯವಾಗಿದೆ ಎಂದು ಸ್ಪಷ್ಟಪಡಿಸಿದರು. ರಾಜ್ಯದಲ್ಲಿ ಆರೋಗ್ಯ ಹಕ್ಕಿನ ಕಾಯ್ದೆಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದ ಅವರು, ಆರೋಗ್ಯ ಸಂರಕ್ಷಣೆ ಎನ್ನುವುದು ಯಾವುದೇ ಸರ್ಕಾರ ಹಿಂತೆಗೆದುಕೊಳ್ಳಬಹುದಾದ ಯೋಜನೆಯಲ್ಲ. ಇತ್ತೀಚಿನ ದಿನಗಳಲ್ಲಿ ಸರ್ಕಾರಗಳು ಸರ್ಕಾರಿ ಆಸ್ಪತ್ರೆಗಳನ್ನು ಪಿಪಿಪಿ(ಪಬ್ಲಿಕ್ ಪಾರ್ಟಿಸಿಪೇಷನ್ ಪ್ರೋಗ್ರಾಂ) ಯೋಜನೆಯಡಿ ಖಾಸಗಿಯವರಿಗೆ ಹಸ್ತಾಂತರಿಸುವ ಪ್ರಯತ್ನ ಮಾಡುತ್ತಿದೆ. ಯಾವುದೇ ಕಾರಣಕ್ಕೂ ಪಿಪಿಪಿ ಯೋಜನೆಯ ಮೂಲಕ ಸರ್ಕಾರಿ ಆಸ್ಪತ್ರೆಗಳನ್ನು ಖಾಸಗಿಯವರಿಗೆ ಹಸ್ತಾಂತರಿಸಕೂಡದು. ಪಿಪಿಪಿ ಯೋಜನೆಯನ್ನು ತಕ್ಷಣ ಕೈಬಿಡಬೇಕೆಂದು ಆಗ್ರಹಿಸಿದರು.
ಪ್ರಸ್ತುತ ಸಾಕಷ್ಟು ಸರಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳಿಗೆ ಖಾಸಗಿ ಔಷಧಿಯಂಗಡಿಗಳಿಗೆ ಚೀಟಿ ಬರೆದುಕೊಡಲಾಗುತ್ತದೆ. ಈ ಕ್ರಮವನ್ನು ತಕ್ಷಣ ನಿಲ್ಲಿಸಿ, ಅಗತ್ಯ ಔಷಧಗಳು ಆಸ್ಪತ್ರೆಯ ಮೂಲಕವೇ ದೊರಕುವಂತೆ ಮಾಡಬೇಕು ಪ್ರಸ್ತುತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ವೆಚ್ಚ, ಔಷಧಿಗಳ ದರ ಗಗನಚುಂಬಿಯಾಗಿದೆ. ಈ ಹಿನ್ನೆಲೆ ಸರಕಾರ ಖಾಸಗಿ ವಲಯದ ಆಸ್ಪತ್ರೆÉಗಳಲ್ಲಿನ ಶುಲ್ಕವನ್ನು ನಿಯಂತ್ರಿಸಬೇಕೆಂದು ಒತ್ತಾಯಿಸಿದರು. ಬುಡಕಟ್ಟು ಕಾರ್ಮಿಕರ ಸಂಘದ ಅಧ್ಯಕ್ಷ ವೈ.ಬಿ.ಗಪ್ಪು, ಸದಸ್ಯರುಗಳಾದ ಕೊಟ್ಟ, ಜೆ.ಆರ್.ಭವ್ಯ, ಪಿ.ಬಿ.ಗೀತಾ, ಗಂಗೆ ಮತ್ತಿತರರು ಹಾಜರಿದ್ದರು.









