ಕುಶಾಲನಗರ ಫೆ.2 : ಕುಶಾಲನಗರ- ಕೊಪ್ಪ ಗಡಿಭಾಗದಲ್ಲಿ ಹೆದ್ದಾರಿ ಬದಿಯಲ್ಲಿದ್ದ ಮರಗಳ ಕೊಂಬೆಗಳನ್ನು ಕಡಿಯುವ ಮೂಲಕ ಮರ ಹಾಗೂ ಪಕ್ಷಿಗಳ ನೆಲೆಗೆ ಹಾನಿ ಮಾಡಲಾಗಿದೆ ಎಂದು ಆರೋಪಿಸಿ ಪರಿಸರ ಪ್ರೇಮಿ ಚಂದ್ರಮೋಹನ್ ಮತ್ತಿತರರು ಅರಣ್ಯ ಇಲಾಖೆಗೆ ದೂರು ಸಲ್ಲಿಸಿದ್ದಾರೆ.
ಮರದ ಕೊಂಬೆಗಳನ್ನು ಕಡಿದ ಕ್ರಮವನ್ನು ಖಂಡಿಸಿ ದಿಢೀರ್ ಪ್ರತಿಭಟನೆ ನಡೆಸಿದ ಚಂದ್ರಮೋಹನ್ ಹಾಗೂ ಸ್ಥಳೀಯರು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಕೆ.ವಿಶಿವರಾಂ ಭೇಟಿ ನೀಡಿ ಮರ ಕಡಿಯದಂತೆ ಸೂಚನೆ ನೀಡಿದರೂ ಸ್ಪಂದಿಸದೆ ಎರಡು ಮರಗಳ ಕೊಂಬೆಯನ್ನು ಕಡಿಯಲಾಗಿದೆ. ಮರ ಕಡಿಯಲು ಕಾರಣಕರ್ತರಾದ ಇಬ್ಬರು ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಚಂದ್ರಮೋಹನ್ ಆಗ್ರಹಿಸಿದರು.
ಸ್ಥಳೀಯ ಪರಿಸರ ಪ್ರೇಮಿಗಳಾದ ಕೊಡಗನ ಹರ್ಷ, ತೋರೆರ ಉದಯ್, ಸುಮನ್ ಬಾಲಚಂದ್ರ, ಎಂ.ಕೃಷ್ಣ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.










