ಮಡಿಕೇರಿ ಫೆ.2 : ಮಣ್ಣು ಸಾಗಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಳು ಸಾಗಾಟದ ಕೇಸ್ ದಾಖಲಿಸುವುದಾಗಿ ವ್ಯಕ್ತಿಯೊಬ್ಬರನ್ನು ಬೆದರಿಸಿ ಲಂಚದ ಬೇಡಿಕೆ ಇಟ್ಟ ಆರೋಪದಡಿ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿಯೊಬ್ಬರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸೋಮಶೇಖರ್ ಸಜ್ಜನ್ ಎಂಬುವವರೇ ಲಂಚ ಕೇಳಿದ ಆರೋಪದಲ್ಲಿ ಸಿಲುಕಿರುವ ಪೊಲೀಸ್ ಸಿಬ್ಬಂದಿ. ಬಿಳಿಗೇರಿ ಗ್ರಾಮದ ವ್ಯಕ್ತಿಯೊಬ್ಬರು ಬೊಲೊರೋ ವಾಹನದಲ್ಲಿ ಮನೆಗೆ ಮಣ್ಣು ಸಾಗಿಸುತ್ತಿದ್ದರು ಎನ್ನಲಾಗಿದೆ.
ಈ ಸಂಬಂಧ 10 ಸಾವಿರ ರೂ.ಗಳನ್ನು ನೇರವಾಗಿ ಪಡೆದುಕೊಳ್ಳದೆ ನಗರದ ಹಳೇ ಖಾಸಗಿ ಬಸ್ ನಿಲ್ದಾಣದ ಬೀಡಾ ಅಂಗಡಿಯ ಮಾಲೀಕನ ಬಳಿ ನೀಡುವಂತೆ ಪೊಲೀಸ್ ಸಿಬ್ಬಂದಿ ಹೇಳಿದ್ದರು ಎಂದು ಹೇಳಲಾಗಿದೆ. ಹಣ ಸ್ವೀಕರಿಸುತ್ತಿದ್ದ ಬೀಡಾ ಅಂಗಡಿ ಮಾಲೀಕನನ್ನು ಲೋಕಾಯುಕ್ತರು ಹಣ ಸಹಿತ ವಶಕ್ಕೆ ಪಡೆದರು. ಆತ ನೀಡಿದ ಮಾಹಿತಿ ಆಧರಿಸಿ ಪೊಲೀಸ್ ಸಿಬ್ಬಂದಿ ಸೋಮಶೇಖರ್ ಸಜ್ಜನ್ ನನ್ನು ಲೋಕಾಯುಕ್ತ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.
ಈ ಪ್ರಕರಣದಲ್ಲಿ ಕೆಲವು ತಾಂತ್ರಿಕ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದ್ದು, ಅದರ ಆಧಾರದಲ್ಲಿ ತನಿಖೆ ಮುಂದುವರೆದಿದೆ ಎಂದು ಮೈಸೂರು ವಿಭಾಗದ ಲೋಕಾಯುಕ್ತ ಎಸ್.ಪಿ ಸುರೇಶ್ ಬಾಬು ತಿಳಿಸಿದ್ದಾರೆ.














