ಮಡಿಕೇರಿ ಫೆ.7 : ಮಹಿಳೆಯರ ಸ್ವಾವಲಂಬಿ ಬದುಕಿಗೆ ಆಸರೆಯಾಗಿರುವ ವಿವಿಧ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ಮಡಿಕೇರಿಯಲ್ಲಿ ಆರಂಭಗೊಂಡಿದೆ.
ಜಿಲ್ಲೆಯಾದ್ಯಂತ ಸ್ತ್ರೀಶಕ್ತಿ, ಸಂಜೀವಿನಿ ಗುಂಪುಗಳು ತಾವು ಬೆಳೆದ ತರಕಾರಿ ಹಾಗೂ ಉತ್ಪಾದಿಸಿದ ವಿವಿಧ ಉತ್ಪನ್ನಗಳ ಮಾರಾಟ ಕಲ್ಪಿಸುವಲ್ಲಿ ಕೊಡಗು ಜಿಲ್ಲಾ ಪಂಚಾಯಿತಿ, ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಸಂಜೀವಿನಿ-ಡೇ ನಲ್ಮ್ (ಎನ್‌ಆರ್‌ಎಲ್‌ಎಂ) ಯೋಜನೆಯಡಿ ಎರಡು ದಿನಗಳ ಕಾಲ ನಗರದ ಗಾಂಧಿ ಮೈದಾನದಲ್ಲಿ ಮೇಳ ನಡೆಯುತ್ತಿದೆ.
ಜಿಲ್ಲಾ ಮಟ್ಟದ ಸ್ವಸಹಾಯ ಗುಂಪುಗಳ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಜೀವ ವೈವಿಧ್ಯ ಮಂಡಳಿ ರಾಜ್ಯ ಅಧ್ಯಕ್ಷ ನಾಪಂಡ ರವಿಕಾಳಪ್ಪ ಮತ್ತು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮಂಗಳವಾರ ಉಪದ್ಘಾಟಿಸಿದರು.
ಮಳಿಗೆಗಳನ್ನು ವೀಕ್ಷಿಸಿ, ಮಾಹಿತಿ ಪಡೆದ ರವಿ ಕಾಳಪ್ಪ ಅವರು ಸ್ತ್ರೀ ಶಕ್ತಿ ಸಂಜೀವಿನಿ ಗುಂಪುಗಳಿಗೆ ಸರ್ಕಾರದ ವತಿಯಿಂದ ಸಹಾಯಧನ ಕಲ್ಪಿಸಿ ಆರ್ಥಿಕ ಉತ್ತೇಜನಕ್ಕೆ ಮುಂದಾಗಲಾಗಿದೆ. ಆ ನಿಟ್ಟಿನಲ್ಲಿ ಸ್ತ್ರೀ ಶಕ್ತಿ ಸಂಜೀವಿನಿ ಗುಂಪುಗಳು ಉತ್ಪಾದಿಸಿದ ವಿವಿಧ ರೀತಿಯ ಉತ್ಪನ್ನಗಳು ಹಾಗೂ ಬೆಳೆದ ತರಕಾರಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಕುಟುಂಬದ ಆರ್ಥಿಕ ನಿರ್ವಹಣೆಗೆ ಸಹಕಾರಿಯಾಗಲಿದೆ ಎಂದರು.
ಗ್ರಾ.ಪಂ.ಮಟ್ಟದಲ್ಲಿಯೂ ಸಹ ಇಂತಹ ಮೇಳಗಳನ್ನು ಆಯೋಜಿಸಲಾಗುತ್ತಿದೆ. ನರ್ಸರಿ, ತರಕಾರಿ, ತಿಂಡಿ ತಿನಿಸು, ಹಪ್ಪಳ, ಜ್ಯೂಸ್ ಹೀಗೆ ಎಲ್ಲಾ ರೀತಿಯ ಉತ್ಪನ್ನಗಳನ್ನು ಮಾರಾಟ ಮಾಡಿ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ. ಇದರಿಂದ ರಾಷ್ಟ್ರದ ಅಭಿವೃದ್ಧಿ ಸಾಧ್ಯ ಎಂದು ಅವರು ತಿಳಿಸಿದರು.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮಾತನಾಡಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್‌ಆರ್‌ಎಲ್‌ಎಂ) ಯೋಜನೆಯಡಿ ಗ್ರಾಮೀಣ ಪ್ರದೇಶದ ರೈತ ಮಹಿಳೆಯರ ಜೀವನೋಪಾಯಕ್ಕಾಗಿ ಆದಾಯ ದ್ವಿಗುಣಗೊಳಿಸಲು ಕೃಷಿ ಜೀವನೋಪಾಯ ಚಟುವಟಿಕೆಗಳನ್ನು ಅನುಷ್ಠಾನ ಮಾಡಲಾಗುತ್ತಿದೆ ಎಂದರು.
ಸಣ್ಣ ಹಾಗೂ ಅತಿ ಸಣ್ಣ ರೈತ ಮಹಿಳೆಯರು ತಾವು ಉತ್ಪಾದಿಸುವ ಕೃಷಿ ಉತ್ಪನ್ನ ವಸ್ತುಗಳಿಗೆ ಮಾರುಕಟ್ಟೆ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ. ಕೃಷಿ ಜೊತೆಗೆ ಉಪ ಕಸುಬುಗಳನ್ನು ಕೈಗೊಂಡು ಸ್ತ್ರೀ ಶಕ್ತಿ ಗುಂಪುಗಳು ಉತ್ಪಾದಿಸಿದ ಉತ್ಪನ್ನಗಳನ್ನು ಮಾರಾಟಕ್ಕೆ ಅವಕಾಶ ಕಲ್ಪಿಸುವುದು ಇದರ ಉದ್ದೇಶವಾಗಿದೆ. ಸುಮಾರು 50 ಮಳಿಗೆಗೆ ಅವಕಾಶ ಮಾಡಲಾಗಿದೆ. ಎಂದರು.
ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ ಅವರು ಮಾತನಾಡಿ ಸ್ತ್ರೀಶಕ್ತಿ ಗುಂಪುಗಳು ಜಿಲ್ಲೆಯಲ್ಲಿ ಕ್ರೀಯಾಶೀಲ ಚಟುವಟಿಕೆಯಿಂದ ವಿವಿಧ ಸ್ವ ಉದ್ಯೋಗ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿವೆ. ಆ ನಿಟ್ಟಿನಲ್ಲಿ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳು ತಯಾರಿಸಿದ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಸ್ತ್ರೀಶಕ್ತಿ ಮಹಿಳಾ ಒಕ್ಕೂಟದ ರಾಜ್ಯ ಮತ್ತು ಜಿಲ್ಲಾ ಅಧ್ಯಕ್ಷರಾದ ರೆಹನಾ ಸುಲ್ತಾನ, ಪೊನ್ನಂಪೇಟೆ ತಾಲ್ಲೂಕು ಅಧ್ಯಕ್ಷರಾದ ರಜನಿ, ಜಿ.ಪಂ.ಉಪ ಕಾರ್ಯದರ್ಶಿ ಎಸ್.ಧನರಾಜು, ಯೋಜನಾ ನಿರ್ದೇಶಕರಾದ ಎಸ್.ಜಗದೀಶ್, ಮುಖ್ಯ ಯೋಜನಾಧಿಕಾರಿ ರಾಜಗೋಪಾಲ್, ಸಹಾಯಕ ಯೋಜನಾಧಿಕಾರಿ ಜೀವನ್ ಕುಮಾರ್, ತಾಲ್ಲೂಕು ಪಂಚಾಯಿತಿ ಇಒ ಶೇಖರ್, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರಾದ ಪಿ.ಕುಮಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್, ಡಾ.ಗೋಪಿನಾಥ್, ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ವಿಶಾಲ್ ಕುಮಾರ್, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ನಂಜುಂಡಯ್ಯ, ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕರಾದ ಜಿ.ಎಸ್.ಗುರುಸ್ವಾಮಿ ಇದ್ದರು.










