ಮಡಿಕೇರಿ ಫೆ.7 : ಸೋಮವಾರಪೇಟೆ ತಾಲ್ಲೂಕು 8ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಫೆ.11ರಂದು ಗೌಡಳ್ಳಿ ಬಿ.ಜಿ.ಎಸ್ ಶಾಲಾ ಮೈದಾನದಲ್ಲಿ ಅರ್ಥಪೂರ್ಣವಾಗಿ ನಡೆಯಲಿದೆ ಎಂದು ಸಮ್ಮೇಳನದ ಪ್ರಚಾರ ಸಮಿತಿ ಅಧ್ಯಕ್ಷ ಹಿರಿಕರ ರವಿ ಹೇಳಿದರು.
ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ಕ.ಸಾ.ಪ.ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ ಕಾಮತ್, ತಾಲ್ಲೂಕು ಅಧ್ಯಕ್ಷ ಎಸ್.ಡಿ.ವಿಜೇತ್ ನೇತೃತ್ವದಲ್ಲಿ, ವಿವಿಧ ಸಮಿತಿಗಳ ಪದಾಧಿಕಾರಿಗಳು ಕನ್ನಡ ಹಬ್ಬವನ್ನು ಯಶಸ್ವಿಗೊಳಿಸಲು ಸಿದ್ಧತೆಯಲ್ಲಿ ತೊಡಕಿಕೊಂಡಿದ್ದಾರೆ ಎಂದು ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಫೆ.11ರ ಶನಿವಾರ ಬೆಳಿಗ್ಗೆ 7.30ಕ್ಕೆ ದೊಡ್ಡಮಳ್ತೆ ಶ್ರೀ ಹೊನ್ನಮ್ಮ ಕೆರೆಯಿಂದ ಬೈಕ್ ಜಾಥ ಹೊರಡಲಿದೆ. ಬೆಳಿಗ್ಗೆ 8 ಗಂಟೆಗೆ ಸೋಮವಾರಪೇಟೆ ತಹಸೀಲ್ದಾರ್ ಎಸ್.ಎನ್.ನರಗುಂದ ಬಿಜಿಎಸ್ ಶಾಲಾ ಆವರಣದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಿದ್ದಾರೆ. ಕ.ಸಾ.ಪ.ಜಿಲ್ಲಾಧ್ಯಕ್ಷರಾದ ಎಂ.ಪಿ.ಕೇಶವಕಾಮತ್, ಕನ್ನಡ ಧ್ಜಜ ಹಾಗೂ ತಾಲ್ಲೂಕು ಅಧ್ಯಕ್ಷ ಎಸ್.ಡಿ.ವಿಜೇತ್ ಕನ್ನಡ ಪರಿಷತ್ ಧ್ವಜಾರೋಹಣ ನೆರವೇರಿಸಲಿದ್ದಾರೆ.
ಬೀಟಿಕಟ್ಟೆ ಕೆನರಾ ಬ್ಯಾಂಕ್ ಜಂಕ್ಷನ್‌ನಿಂದ 9 ಗಂಟೆಗೆ ಗಂಟೆಗೆ ಸಮ್ಮೇಳನಾಧ್ಯಕ್ಷರನ್ನು ಮಂಗಳವಾದ್ಯ, ಪೂರ್ಣಕುಂಭ, ಕಲಾ ತಂಡಗಳು, ಸ್ತಬ್ಧ ಚಿತ್ರಗಳ ಮೆರವಣಿಗೆಯೊಂದಿಗೆ ಮೆರವಣಿಗೆಯಲ್ಲಿ ಕರೆತರಲಾಗುವುದು. ಕನ್ನಡಾಭಿಮಾನಿಗಳು ಮೆರವಣಿಕೆಯಲ್ಲಿ ಭಾಗವಹಿಸಲಿದ್ದಾರೆ.
9 ಗಂಟೆಗೆ ಗಣ್ಯರ ನೆನಪಿನ ವಿವಿಧ ದ್ವಾರಗಳ ಉದ್ಘಾಟನೆ ನಡೆಯಲಿದೆ. ಬೆಳ್ಳಿಯಪ್ಪಗೌಡ ನೆನಪಿನ ದ್ವಾರ, ಹಾರಳ್ಳಿ ಶ್ರೀ ಚನ್ನಕೇಶವ ಸ್ವಾಮಿ ನೆನಪಿನ ದ್ವಾರ, ಹಿರಿಕರ ದಿ.ಜಿ.ಎ. ಸುಬ್ಬೇಗೌಡರ ನೆನಪಿನ ದ್ವಾರ, ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ನೆನಪಿನ ದ್ವಾರ, ಶ್ರೀ ಚೌಡೇಶ್ವರಿ ಯುವಕ ಸಂಘದ ನೆನಪಿನ ದ್ವಾರ, ದಿ.ವೆಂಕಟರಮಣಾಚಾರ್ಯ ನೆನಪಿನ ದ್ವಾರ, ಪುಲಿಗೇರಿ ಬಸವೇಶ್ವರ ಸ್ವಾಮಿ ನೆನಪಿನ ದ್ವಾರ, ದಿ.ಗುರಪ್ಪ ಮಾಸ್ಟರ್ ನೆನಪಿನ ದ್ವಾರ, ದೊಡ್ಡಮಳ್ತೆ ಶ್ರೀ ಹೊನ್ನಮ್ಮ ತಾಯಿ ಪುಣ್ಯಕ್ಷೇತ್ರ ದ್ವಾರ, ಹಣಕೋಡು ಶ್ರೀ ಬಸವೇಶ್ವರ ಸ್ವಾಮಿ ನೆನಪಿನ ದ್ವಾರ, ಕೂಗೇಕೋಡಿ ಕನ್ನಂಬಾಡಿಯಮ್ಮ ನೆನಪಿನ ದ್ವಾರಗಳನ್ನು ಗಣ್ಯರು ಉದ್ಘಾಟಿಸಲಿದ್ದಾರೆ. ದಿ.ವಿ.ಟಿ.ಈರಪ್ಪ ಅವರ ನೆನಪಿನ ಮುಖ್ಯದ್ವಾರ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ನೆನಪಿನ ದ್ವಾರ, ಶ್ರೀ ಬಾಲಗಂಗಾಧರನಾಥ ಸ್ವಾಮಿ ಮುಖ್ಯ ವೇದಿಕೆಯನ್ನು ಗಣ್ಯರು ಉದ್ಘಾಟಿಸಲಿದ್ದಾರೆ.
11ಗಂಟೆಗೆ ನಡೆಯುವ ಸಮ್ಮೇಳನವನ್ನು ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಉದ್ಘಾಟಿಸಲಿದ್ದಾರೆ. ಆದಿ ಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ದಿವ್ಯಸಾನಿಧ್ಯ ವಹಿಸಲಿದ್ದಾರೆ. ಮೈಸೂರು ರತ್ನಪುರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ಮಹದೇವ ಸ್ವಾಮಿ ಮುಖ್ಯ ಭಾಷಣ ಮಾಡಲಿದ್ದಾರೆ. ಮಾಜಿ ಸಚಿವ ಬಿ.ಎ. ಜೀವಿಜಯ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ. ಬೇಸೂರು ಮೋಹನ್ ಪಾಳೇಗಾರ್ ಅವರ ‘ವಲಸೆ ಹಕ್ಕಿಯ ಹಾಡು ಪಾಡು’ ಹಾಗು ಜಲಕಾಳಪ್ಪ ಅವರ ‘ಭರವಸೆಯ ಬೆಳಕು’ ಪುಸ್ತಕಗಳನ್ನು ಕ.ಸಾ.ಪ. ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್ ಉದ್ಘಾಟಿಸಲಿದ್ದಾರೆ. ಸಮ್ಮೇಳನಾಧ್ಯಕ್ಷರಾದ ಶ.ಗ.ನಯನತಾರ ಸಮ್ಮೇಳನಾ ಭಾಷಣ ಮಾಡಲಿದ್ದಾರೆ. ಗೌಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಲ್ಲಿಕಾ, ದೊಡ್ಡಮಳ್ತೆ ಗ್ರಾ.ಪಂ ಅಧ್ಯಕ್ಷೆ ಕೆ.ಎಂ. ಬಿಂದು ಮತ್ತಿತರರ ಗಣ್ಯರು ಭಾಗವಹಿಸಲಿದ್ದಾರೆ.
ಮಧ್ಯಾಹ್ನ 1.30 ರಿಂದ 2.30ರ ತನಕ ಗೀತಾಗಾಯನ ಸ್ಪರ್ಧೆ ನಡೆಯಲಿದೆ. 3 ಗಂಟೆಗೆ ವಿಚಾರಗೋಷ್ಠಿ ಪ್ರಾರಂಭವಾಗಲಿದೆ. ‘ಸಾಹಿತ್ಯ, ಕಲೆ, ಸಾಂಸ್ಕೃತಿಕ ಕ್ಷೇತ್ರಕ್ಕೆ ಸೋಮವಾರಪೇಟೆ ತಾಲ್ಲೂಕಿನ ಕೊಡುಗೆ’ ವಿಷಯದ ಬಗ್ಗೆ ಸೋಮವಾರಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ತಿಲೋತ್ತಮೆ ನಂದಕುಮಾರ್, ‘ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಸಾಮಾರಸ್ಯ’ ವಿಷಯದ ಕುರಿತು ಶನಿವಾರಸಂತೆ ವಿಘ್ನೇಶ್ವರ ಪ್ರೌಢಶಾಲೆಯ ಶಿಕ್ಷಕ ಕೆ.ಪಿ. ಜಯಕುಮಾರ್ ಉಪನ್ಯಾಸ ನೀಡಲಿದ್ದಾರೆ.
4ಗಂಟೆಗೆ ಕವಿಗೋಷ್ಠಿ ಹಾಗೂ ಸಂಜೆ 4.30ಕ್ಕೆ ಬಹಿರಂಗ ಅಧಿವೇಶನ ನಡೆಯಲಿದೆ. ಕ.ಸಾ.ಪ.ತಾಲ್ಲೂಕು ಗೌರವ ಕಾರ್ಯದರ್ಶಿ ಎ.ಪಿ.ವೀರರಾಜು ನಿರ್ಣಯ ಮಂಡಿಸಲಿದ್ದಾರೆ. ಸಂಜೆ 5 ಗಂಟೆಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಕೃಷಿ ಕ್ಷೇತ್ರದಲ್ಲಿ ಕೆರಹಳ್ಳಿ ಕೆ.ಎಂ.ಕಾಂತರಾಜು, ಗೌಡಳ್ಳಿ ತಾಯಮ್ಮ, ಶಿಕ್ಷಣ ಕ್ಷೇತ್ರದಲ್ಲಿ ಕೊಡ್ಲಿಪೇಟೆ ಸತೀಶ್, ಗೌಡಳ್ಳಿ ಬಿ.ಬಿ. ದಿನೇಶ್, ಶಾಂತಳ್ಳಿ ಎಸ್.ವಿ.ವಿಠಲ, ಪತ್ರಿಕಾ ಕ್ಷೇತ್ರದಲ್ಲಿ ರವಿ ಹಿರಿಕರ, ನಾಟಿ ವೈದ್ಯೆ ಸಜ್ಜಳ್ಳಿ ಜೇನುಕುರುಬರ ಸೀತೆ, ಗುಡಿ ಕೈಗಾರಿಕೆ ಶನಿವಾರಸಂತೆ ಸುಶೀಲಾ ನಾಗರಾಜು, ಉತ್ತಮ ದಾದಿ ಹಿರಿಕರ ಗ್ರಾಮದ ಅಕ್ಕಮ್ಮ ಮುತ್ತಣ್ಣ, ಸಮಾಜ ಸೇವೆ ಗೌಡಳ್ಳಿ ಫ್ರಾನ್ಸಿಸ್ ಡಿಸೋಜ, ಸೋಮವಾರಪೇಟೆ ಎಚ್.ಎ. ನಾಗರಾಜ್, ಸೇನೆಯ ಕಿಬ್ಬೆಟ್ಟ ನಿವೃತ್ತ ಯೋಧ ಕೆ.ಕೆ. ವಿಜಯಕುಮಾರ್, ಕಲಾಕ್ಷೇತ್ರ ಕವಿತ ಪೀಟರ್, ಸಹಕಾರ ಕ್ಷೇತ್ರ ಕೊಡ್ಲಿಪೇಟೆ ತಮ್ಮಯ್ಯ, ರಕ್ಷಣಾ ಕ್ಷೇತ್ರದಲ್ಲಿ ನಿವೃತ್ತ ಡಿವೈಎಸ್‌ಪಿ ಕೂಡಕಂಡಿ ಎ.ಸೋಮಣ್ಣ ಅವರುಗಳು ಸನ್ಮಾನ ಸ್ವೀಕರಿಸಲಿದ್ದಾರೆ.
5.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಮೈಸೂರು ವಿಶ್ವವಿದ್ಯಾಲಯ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಕಾಳೇಗೌಡ ನಾಗವಾರ ಸಮಾರೋಪ ಭಾಷಣ ಮಾಡಲಿದ್ದಾರೆ. ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಜೆ 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಕ.ಸಾ.ಪ. ತಾಲ್ಲೂಕು ಅಧ್ಯಕ್ಷ ಎಸ್.ಡಿ. ವಿಜೇತ್, ಗೌರವ ಕಾರ್ಯದರ್ಶಿಗಳಾದ ಜ್ಯೋತಿ ಅರುಣ್, ಎ.ಪಿ. ವೀರರಾಜು, ಖಚಾಂಚಿ ಕೆ.ಪಿ.ದಿನೇಶ್ ಇದ್ದರು.
Breaking News
- *ಜ.5 ರಂದು ಪತ್ರಕರ್ತರ ಕ್ರಿಕೆಟ್ ಕಲರವ : ಆಟಗಾರರ ಪಟ್ಟಿ ಬಿಡುಗಡೆ*
- *ಮಡಿಕೇರಿಯ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯಲ್ಲಿ ಸಂವಿಧಾನ ದಿನಾಚರಣೆ : ಮೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ನೀಡಿ : ಸಿವಿಲ್ ನ್ಯಾಯಾಧೀಶೆ ಶುಭ*
- *ಅರೆಕಾಲಿಕ ಕಾನೂನು ಸ್ವಯಂ ಸೇವಕರಿಗೆ ಗುರುತಿನ ಚೀಟಿ ವಿತರಣೆ : ಜನಸಾಮಾನ್ಯರಿಗೆ ಕಾನೂನು ಅರಿವು ಮತ್ತು ನೆರವು ಕಲ್ಪಿಸಿ : ನ್ಯಾಯಾಧೀಶ ಹೊಸಮನಿ ಪುಂಡಲೀಕ ಸಲಹೆ*
- *ಬಸವನಹಳ್ಳಿ ವಸತಿ ಶಾಲೆಯಲ್ಲಿ ನಾಟಕ ಶಿಬಿರ*
- *ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ*
- *ಚಿರತೆ ಸೆರೆಗೆ ಸೂಚನೆ*
- *ಕರಿಕೆ- ಭಾಗಮಂಡಲ ಹೆದ್ದಾರಿ ಕಾಮಗಾರಿಗೆ ಚಾಲನೆ : ಮೂಲಭೂತ ಸೌಲಭ್ಯ ಒದಗಿಸುವ ಭರವಸೆ ನೀಡಿದ ಶಾಸಕ ಪೊನ್ನಣ್ಣ*
- *ಮೂರ್ನಾಡಿನಲ್ಲಿ 69ನೇ ಕನ್ನಡ ರಾಜ್ಯೋತ್ಸವ ಸಂಭ್ರಮ*
- *ಪ್ರಧಾನಿಯನ್ನು ಭೇಟಿಯಾದ ಸಿಎಂ, ಡಿಸಿಎಂ : ವಿವಿಧ ಬೇಡಿಕೆಗಳ ಮನವಿ ಸಲ್ಲಿಕೆ*
- *ಅಭಿವೃದ್ದಿಯಲ್ಲಿ ರಾಜಕಾರಣ ಮಾಡಲಾರೆ : ಶಾಸಕ ಎ.ಎಸ್.ಪೊನ್ನಣ್ಣ*