ಚೆಯ್ಯಂಡಾಣೆ ಫೆ. 9 : ಹುತಾತ್ಮ ವೀರ ಯೋಧ ಅಲ್ತಾಫ್ ಒಂದನೇ ವರ್ಷದ ಸ್ಮರಣಾರ್ಥ ಫೆ. 11 ಹಾಗೂ 12 ರಂದು ಚೆಯ್ಯಂಡಾಣೆಯಲ್ಲಿ ಎಡಪಾಲ ಪ್ರಿಮಿಯರ್ ಲೀಗ್ ಸೀಸನ್ – 9 ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ ಎಂದು ಇಪಿಎಲ್ ಪಂದ್ಯದ ಸ್ಥಾಪಕ ಅಧ್ಯಕ್ಷ ಹನೀಫ್ ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಚೆಯ್ಯಂಡಾಣೆ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪಂದ್ಯಾವಳಿ ನಡೆಯಲಿದ್ದು, ಒಟ್ಟು 8 ತಂಡಗಳಲ್ಲಿ 96 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ ಎಂದರು.
ಚೆಯ್ಯ0ಡಾಣೆ ವ್ಯಾಪ್ತಿಗೆ ಒಳಪಟ್ಟ ನರಿಯಂದಡ, ಕೊಕೇರಿ, ಚೇಲಾವರ ಗ್ರಾಮಕ್ಕೆ ಒಳಪಟ್ಟ ಕ್ರೀಡಾಪಟುಗಳನ್ನು ಬಿಡ್ಡಿಂಗ್ ಮೂಲಕ ಆಯ್ಕೆ ಮಾಡಲಾಗಿದ್ದು, 8 ತಂಡಕ್ಕೆ ಲೀಗ್ ಮಾದರಿ ಪಂದ್ಯಾವಳಿ ನಡೆಯಲಿದೆ ಎಂದು ತಿಳಿಸಿದರು.
ಔಟ್ ಲುಕ್ ಬ್ಲಾಸ್ಟರ್ಸ್, ಬ್ಲೂ ಹಿಗಲ್, ಸ್ಟಾರ್ ಕ್ರಿಕೆಟರ್ಸ್, ವಿಲೇಜ್ ಪ್ಯಾಂಥರ್ಸ್, ದಿಲ್ ದಾರ್, ರಾಯಲ್ ಚಾಲೆಂಜರ್ಸ್, ರಿಸಿಂಗ್ ಬಾಯ್ಸ್,ಸೈಲೆಂಟ್ ಕಿಲ್ಲರ್ ತಂಡಗಳು ಪೈಪೋಟಿ ನೀಡಲಿದ್ದು, ಪ್ರಥಮ ಬಹುಮಾನ 25 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ 15 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ಅಲ್ಲದೆ ವಿವಿಧ ವೈಯಕ್ತಿಕ ಬಹುಮಾನ ಕೂಡ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಫೆ. 11 ರಂದು ಬೆಳಿಗ್ಗೆ 8 ಗಂಟೆಗೆ ಗ್ರಾ.ಪಂ ಅಧ್ಯಕ್ಷ ಬಿದ್ದಂಡ ರಾಜೇಶ್ ಅಚ್ಚಯ್ಯ ಕ್ರೀಡಾಕೂಟ ಉದ್ಘಾಟಿಸಲಿದ್ದು, 12 ರ ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಕಾರ್ಯಕ್ರಮಕ್ಕೆ ಹಲವಾರು ಸಾಮಾಜಿಕ,ರಾಜ್ಯಕೀಯ ನೇತಾರರು ಭಾಗವಹಿಸಲಿದ್ದಾರೆ. ಕ್ರೀಡಾ ಕೂಟದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕ್ರೀಡಾ ಕೂಟ ಯಶಸ್ವಿ ಗೊಳಿಸುವಂತೆ ಕೋರಿದರು.
ಸುದ್ದಿಗೋಷ್ಠಿಯಲ್ಲಿ ಎಡಪಾಲ ಪ್ರಿಮಿಯರ್ ಲೀಗ್ ಕ್ರೀಡಾಕೂಟದ ಅಧ್ಯಕ್ಷ ಶಂಸುದ್ದಿನ್, ಉಪಾಧ್ಯಕ್ಷ ನಾಸರ್, ಕೋಶಾಧಿಕಾರಿ ಶಾನೀಫ್, ಸದಸ್ಯ ನೌಫಲ್, ಆಶೀದ್ ಉಪಸ್ಥಿತರಿದ್ದರು.
ವರದಿ : ಅಶ್ರಫ್