ಮಡಿಕೇರಿ ಫೆ.9 : ಕರುನಾಡ ಜನತೆಯ ಆರೋಗ್ಯ ರಕ್ಷಕ ಆಯುಷ್ಮಾನ್ ಭಾರತ್-ಪ್ರಧಾನಮಂತ್ರಿ ಜನಾರೋಗ್ಯ ಆರೋಗ್ಯ ಕರ್ನಾಟಕ ಯೋಜನೆಯಡಿ ಪ್ರಯೋಜನ ಪಡೆಯಲು ಆಯುಷ್ಮಾನ್ ಕಾರ್ಡ್ ಮಾಡಿಸಿ. ಆಯುಷ್ಮಾನ್ ಕಾರ್ಡ್‍ಗಳನ್ನು ಹತ್ತಿರದ ಗ್ರಾಮ ಒನ್‍ನಿಂದ ರೇಷನ್‍ಕಾರ್ಡ್ ಲಿಂಕ್ ಆಗಿರುವ ಆಧಾರ್ ಕಾರ್ಡ್ ನೀಡಿ ಉಚಿತವಾಗಿ ಪಡೆಯುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್ ಅವರು ಕೋರಿದ್ದಾರೆ.
ಆಯುಷ್ಮಾನ್ ಕಾರ್ಡ್ ಹೊಂದಿರುವ ಬಿಪಿಎಲ್ ಫಲಾನುಭವಿಗಳಿಗೆ ವರ್ಷಕ್ಕೆ 5 ಲಕ್ಷ ರೂ ವರೆಗೂ ಎಪಿಎಲ್ ಫಲಾನುಭವಿಗಳಿಗೆ 1.50 ಲಕ್ಷ ದವರೆಗೂ ಸಹ ಪಾವತಿ ಆಧಾರದಲ್ಲಿ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಸಂಸ್ಥೆಗೆ ಭರಿಸಲಿದೆ.
ಈ ಕಾರ್ಡ್‍ನ ನೆರವಿನಿಂದ ದೇಶದಲ್ಲಿ ಎಲ್ಲೇ ಇದ್ದರೂ ಉಚಿತವಾಗಿ ಚಿಕಿತ್ಸೆ ಪಡೆಯಲು ಪೋರ್ಟಬಿಲಿಟಿ ಸೌಲಭ್ಯವಿದೆ. ತುರ್ತು ಸಂದರ್ಭದಲ್ಲಿ 171 ಚಿಕಿತ್ಸಾ ವಿಧಾನಗಳಿಗೆ ರೋಗಿಯು ನೇರವಾಗಿ ಸರ್ಕಾರಿ ಅಥವಾ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು. ರೆಫರಲ್ ಅವಶ್ಯಕತೆ ಇರುವುದಿಲ್ಲ. ಈ ಕಾರ್ಡ್‍ನ್ನು 14 ಸಂಖ್ಯೆಯ ಆಭಾ ಹೆಲ್ತ್ ಐಡಿಯೊಂದಿಗೆ ಸಂಯೋಜಿಸಲಾಗಿದೆ. ಕಾರ್ಡ್ ಇದ್ದರೂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಿಲ್ಲದಿದ್ದಲ್ಲಿ ಮಾತ್ರ ರೆಫರಲ್ ಆಧಾರದ ಮೇಲೆ ನೋಂದಾಯಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು.
ಕೊಡಗು ಜಿಲ್ಲೆಯಲ್ಲಿ 4,26,000 ಆಭಾ ಕಾರ್ಡ್ ಜನರೇಟ್ ಮಾಡಿಸಬೇಕಾದ ಗುರಿ ಇದ್ದು, ಈಗ 1,04,000 ಆಭಾ ಕಾರ್ಡ್‍ನ್ನು ಜನರೇಟ್ ಮಾಡಲಾಗಿದೆ. ಉಳಿದ 3,22,000 ಆಭಾ ಕಾರ್ಡ್‍ಗಳನ್ನು ಮಾಡಿಸಲು ಸಾರ್ವಜನಿಕರು ಸಹಕರಿಸಿ, ಇದರ ಉಪಯೋಗ ಪಡೆದುಕೊಳ್ಳಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್ ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 104 ಅಥವಾ 14555 ಕ್ಕೆ ಕರೆಮಾಡಿ ಮಾಹಿತಿ ಪಡೆಯಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರು ತಿಳಿಸಿದ್ದಾರೆ.









