ವಿರಾಜಪೇಟೆ ಫೆ.9 : ಎರಡು ಶತಮಾನಕ್ಕು ಹೆಚ್ಚಿನ ಇತಿಹಾಸವನ್ನು ಹೊಂದಿರುವ ಪಟ್ಟಣ ಸಂತ ಅನ್ನಮ್ಮ ಚರ್ಚ್ ನ ವಾರ್ಷಿಕ ಮಹೋತ್ಸವ ಹಾಗೂ ಲೂರ್ದು ಮಾತೆಯ ಉತ್ಸವವು ಫೆ.11 ರಂದು ಶ್ರದ್ಧಾಭಕ್ತಿಯಿಂದ ನಡೆಯಲಿದೆ.
ಉತ್ಸವಕ್ಕೆ ಸಂತ ಅನ್ನಮ್ಮ ಚರ್ಚ್‍ನ ಪ್ರಧಾನ ಧರ್ಮಗುರುಗಳಾದ ಡಾ.ದಯಾನಂದ ಪ್ರಭು ಅವರ ನೇತೃತ್ವದಲ್ಲಿ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಹಾಸನದ ಸಂತ ಅಂತೋಣಿ ಧರ್ಮಕೇಂದ್ರದ ಧರ್ಮಗುರು ಪ್ಯಾಟ್ರಿಕ್ ಜೊವಾನ್ನೆಸ್ ಅವರು ಉತ್ಸವದ ಅಂಗವಾಗಿ ನಡೆಯಲಿರುವ ಆಡಂಭರ ಗಾಯನ ಬಲಿಪೂಜೆಯನ್ನು ನೆರವೇರಿಸಿಕೊಡಲಿದ್ದಾರೆ.
ಪ್ರಧಾನ ಪೂಜೆಯ ಬಳಿಕ ಸಾಹಿತಿ ಹಾಗೂ ಧರ್ಮಕೇಂದ್ರದ ಪ್ರಧಾನ ಧರ್ಮಗುರುಗಳಾದ ಡಾ.ದಯಾನಂದ ಪ್ರಭು ಅವರ ‘ಧ್ಯಾನ ಸಂಗಮ’ ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಬಳಿಕ ವಿದ್ಯುತ್ ದೀಪಾಲಂಕೃತ ತೇರಿನ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ. ರಾತ್ರಿ ಚರ್ಚ್‍ನಲ್ಲಿ ಅನ್ನ ಸಂತರ್ಪಣೆ ನಡೆಯಲಿದೆ.
ವಾರ್ಷಿಕ ಉತ್ಸವದಲ್ಲಿ ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕರಾದ ಧರ್ಮಗುರು ಐಸಾಕ್ ರತ್ನಾಕರ್, ಧರ್ಮಗುರು ಯೇಸು ಪ್ರಸಾದ್ ಸೇರಿದಂತೆ ವಿವಿಧೆಡೆಯ ಧರ್ಮಗುರುಗಳು ಭಾಗವಹಿಸಲಿದ್ದಾರೆ.