ಮಡಿಕೇರಿ ಫೆ.10 : ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಆಯುಷ್ ಇಲಾಖೆ ವತಿಯಿಂದ ಕುಶಾಲನಗರ ತಾಲ್ಲೂಕಿನ ನೇತಾಜಿ ಯುವ ಸಂಘದ ಸಭಾಂಗಣದಲ್ಲಿ ‘ಆಯುಷ್ ಸೇವಾ ಗ್ರಾಮ’ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯಿತು.
ಪಿಡಿಒ ರಾಜಶೇಖರ್, ಗ್ರಾ.ಪಂ.ಉಪಾಧ್ಯಕ್ಷರಾದ ಕವಿತಾ, ಸದಸ್ಯರಾದ ನೀತಾ ಹರೀಶ್, ಸುನಿಲ್, ಚನ್ನಬಸವಿ ಹಾಗೂ ಜಿಲ್ಲಾ ಆಯುಷ್ ಅಧಿಕಾರಿ ಡಾ.ರೇಣುಕಾದೇವಿ ಮತ್ತು ಜಿಲ್ಲಾ ಸರ್ಕಾರಿ ಆಯುರ್ವೇದ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಎಚ್.ಆರ್.ಸರಸ್ವತಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪಿಡಿಒ ರಾಜ್‍ಶೇಖರ್ ಮಾತನಾಡಿ ಆಯುಷ್ ವೈದ್ಯ ಪದ್ಧತಿಯಿಂದ ಅಡ್ಡಪರಿಣಾಮವಿಲ್ಲದ ಚಿಕಿತ್ಸೆ ಪಡೆಯುವುದು, ಆಯುಷ್ ಅರಿವು, ಮನೆಮದ್ದು, ಪ್ರಾತ್ಯಕ್ಷಿಕೆ ಹಾಗೂ ಉಚಿತ ಆರೋಗ್ಯ ಶಿಬಿರದ ಪ್ರಯೋಜನವನ್ನು ಎಲ್ಲರೂ ಪಡೆಯಬೇಕು ಎಂದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ರೇಣುಕಾ ದೇವಿ ಮಾತನಾಡಿ ಆಯುಷ್ ಸೇವಾ ಗ್ರಾಮದ ಬಗ್ಗೆ ಸಂಪೂರ್ಣ ವಿವರ ನೀಡಿದರು.
ಕಾರ್ಯಕ್ರಮದಲ್ಲಿ ಇಲಾಖೆಯಿಂದ ಔಷಧಿ ಗಿಡಗಳನ್ನು ಹಾಗೂ ಕ್ಯಾಲೇಂಡರ್‍ಗಳನ್ನು ಸಾರ್ವಜನಿಕರಿಗೆ ವಿತರಿಸಲಾಯಿತು. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಶಿಕ್ಷಕರು ಪಾಲ್ಗೊಂಡಿದ್ದರು.











