ಮಡಿಕೇರಿ ಫೆ.10 : ಗೋವಾದ ಕೇಂದ್ರೀಯ ಕರಾವಳಿ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಕರ್ನಾಟಕ, ಕೇರಳ, ಮಹಾರಾಷ್ಟ್ರ ರಾಜ್ಯಗಳ ಆಕಾಶವಾಣಿ ಮತ್ತು ದೂರದರ್ಶನ ಕೃಷಿ ಕಾರ್ಯಕ್ರಮ ಹಾಗೂ ಅಧಿಕಾರಿಗಳ ಕಾರ್ಯಾಗಾರ ನಡೆಯಿತು.
ಕಾರ್ಯಕ್ರಮದಲ್ಲಿ ಮಡಿಕೇರಿ ಆಕಾಶವಾಣಿಯಲ್ಲಿ ಪ್ರತೀ ದಿನ ಸಂಜೆ 6.50 ಕ್ಕೆ ಬಿತ್ತರಿಸುತ್ತಿರುವ ಕಿಸಾನ್ ವಾಣಿ ಕಾರ್ಯಕ್ರಮಗಳನ್ನು ಪರಿಚಯಿಸಿ, ಕೃಷಿ ಗೀತೆಗಳನ್ನು ಅಧರಿಸಿದ ಕೃಷಿ ಕಳಸದ ಬಗ್ಗೆ ಮಾಹಿತಿ ನೀಡಲಾಯಿತು. ಇದು ದೆಹಲಿಯಿಂದ ಆಗಮಿಸಿದ್ದ ಆಕಾಶವಾಣಿಯ ಹಾಗೂ ಕೃಷಿ ಮತ್ತು ರೈತ ಕಲ್ಯಾಣ ಮಂತ್ರಾಲಯದ ಹಿರಿಯ ಅಧಿಕಾರಿಗಳ ಮೆಚ್ಚುಗೆಯನ್ನು ಗಳಿಸಿತು.
ಮಡಿಕೇರಿ ಆಕಾಶವಾಣಿಯಲ್ಲಿ ಕೃಷಿ ಕುರಿತು ತಯಾರಿಸಿರುವ 50 ಕೃಷಿ ಗೀತೆಗಳ ಬಗ್ಗೆಯೂ ಉಲ್ಲೇಖ ಮಾಡಲಾಯಿತು. ಅಧಿಕಾರಿಗಳು ಈ ಪ್ರಯತ್ನ ಉಪಯುಕ್ತವಾಗಿದ್ದು, ಪರಿಣಾಮಕಾರಿಯಾಗಿದೆ ಎಂದು ಒಕ್ಕೊರಳಿಂದ ಹೇಳಿದರು. ಅಲ್ಲದೆ ಹಾಡುಗಳ ಮೂಲಕ ಕೃಷಿ ಮಾಹಿತಿ ತಿಳಿಸುವುದು ಸೂಕ್ತ ಎಂದವರು ಹೇಳಿದರು.
ಮಡಿಕೇರಿ ಆಕಾಶವಾಣಿಯಿಂದ ಮಾಡುತ್ತಿರುವ ಕೃಷಿ ರಸ ಪ್ರಶ್ನೆಗಳ ನೇರ ಪ್ರಸಾರದ ಕೃಷಿ ಸಿರಿ, ನೇರ ಫೋನ್ ಇನ್, ಇತ್ಯಾದಿ ಕಾರ್ಯಕ್ರಮಗಳ ಬಗ್ಗೆಯೂ ಅಧಿಕಾರಿಗಳಿಗೆ ತಿಳಿಸಲಾಯಿತು.
ಕೃಷಿ ಕಾರ್ಯಕ್ರಮಗಳ ಪ್ರಸಾರ ಮುನ್ನ ಮೂಡಿಬರುವ ಕೋಟಿ ವಿದ್ಯೆಗಳಲ್ಲಿ ಕೃಷಿ ವಿದ್ಯೆಯೇ ಮೇಲು, ಕೃಷಿತೋ ನಾಸ್ತಿ ದುರ್ಭಿಕ್ಷ ಎಂಬ ವಾಕ್ಯಗಳೊಂದಿಗೆ ಕಾಣಿಸುವ ಸಂಗೀತವೂ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಯಿತು.