ಶನಿವಾರಸಂತೆ ಫೆ.10 : ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಾಧ್ಯಮ ಕ್ಷೇತ್ರವು ಒಂದಾಗಿದ್ದು, ವಿದ್ಯಾವಂತರಿಗೆ ಉದ್ಯೋಗವಕಾಶಗಳಿವೆ ಎಂದು ಆಲೂರು ಸಿದ್ದಾಪುರ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಎ.ಎಸ್.ಶ್ರುತಿ ಅಭಿಪ್ರಾಯಪಟ್ಟರು.
ಶನಿವಾರಸಂತೆ ಪ್ರೌಢಶಾಲೆಯ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ವಿದ್ಯಾರ್ಥಿಗಳಿಗೆ ಪತ್ರಿಕೆ ಮತ್ತು ಸಮೂಹ ಮಾಧ್ಯಮಗಳ ಕುರಿತು ಹಮ್ಮಿಕೊಂಡಿದ್ದ ಮಾಹಿತಿ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಮಾಧ್ಯಮಗಳು ನಾಲ್ಕನೆ ಅಂಗವಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ಮೂಲಕ ಸಮಾಜವನ್ನು ತಿದ್ದುವ ಕಾರ್ಯಮಾಡುತ್ತಿದೆ ಎಂದರು. ವಿದ್ಯಾರ್ಥಿಗಳಿಗೆ ಪತ್ರಿಕೆ, ಮಾಧ್ಯಮಗಳ ಬಗ್ಗೆ ಅರಿವಿನ ಅಗತ್ಯ ಇದೆ. ಈ ಮೂಲಕ ವಿದ್ಯಾರ್ಥಿಗಳು ಪತ್ರಿಕೋದ್ಯಮ ಕ್ಷೇತ್ರದ ಬಗ್ಗೆ ಆಸಕ್ತಿವಹಿಸುವಂತೆ ಸಲಹೆ ನೀಡಿದರು.
ಶಾಲೆಯ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಯೋಜನಾಧಿಕಾರಿ ಧರ್ಮಪ್ಪ ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ವತಿಯಿಂದ ಹಲವಾರು ಮಾಹಿತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಇತರೆ ವಿಷಯಗಳ ಬಗ್ಗೆ ಅರಿವು ಮೂಡುತ್ತದೆ ಎಂದ ಅವರು ವಿದ್ಯಾರ್ಥಿಗಳಿಗೆ ಪತ್ರಿಕೋದ್ಯಮ ಬಗ್ಗೆ ಆಸಕ್ತಿ ಮೂಡಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ವಿದ್ಯಾರ್ಥಿಗಳಿಗೆ ಅಕ್ಷರ ಮಾಧ್ಯಮ, ಎಲೆಕ್ಟ್ರಾನಿಕ್ ಮಾಧ್ಯಮ, ದೃಶ್ಯ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣ ಒಳಗೊಂಡಂತೆ ಸಮೂಹ ಮಾಧ್ಯಮಗಳ ವ್ಯವಸ್ಥೆ, ದಿನ ಪತ್ರಿಕೆಗಳು, ವಾರ ಪತ್ರಿಕೆ, ಮಾಸಿಕ ಪತ್ರಿಕೆ ಮ್ಯಾಗ್‌ಜಿನ್‌ಗಳ ಬಗ್ಗೆ, ರೇಡಿಯೋ, ದೂರದರ್ಶನ, ಅಂತರ್ಜಾಲ ವ್ಯವಸ್ಥೆಗಳ ಬಗ್ಗೆ, ದೃಶ್ಯ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣ ವ್ಯವಸ್ಥೆಯಲ್ಲಿರುವ ಸಾಧಕ ಬಾಧಕಗಳ ಬಗ್ಗೆ ಹಾಗೂ ಮಾಧ್ಯಮಗಳಲ್ಲಿ ಸುದ್ದಿ ಮಾಡುವ ಬಗ್ಗೆ ಸಮಗ್ರ ಮಾಹಿತಿ ನೀಡಲಾಯಿತು.
ಪತ್ರಕರ್ತ ಸುರೇಶ್ ಚೆರಿಯಮನೆ ಮಾತನಾಡಿ, ಪತ್ರಕರ್ತರಾಗುವವರಲ್ಲಿ ಸೇವಾ ಮನೋಭಾವ ಇರಬೇಕು. ಪತ್ರಿಕೆಗಳಲ್ಲಿ ಪ್ರತಿನಿತ್ಯ ಉತ್ತಮ ವಿಷಯಗಳು ಇರುತ್ತದೆˌ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಅನೇಕ ವಿಚಾರಗಳು ಪತ್ರಿಕೆಗಳಲ್ಲಿ ಬರುವುದರಿಂದ ವಿದ್ಯಾರ್ಥಿಗಳು ಅದನ್ನು ಸದುಪಯೋಗ ಪಡಿಸಿಕೊಳ್ಳ ಬೇಕು ಎಂದರು.
ಪತ್ರಕರ್ತ ದಿನೇಶ್ ಮಾಲಂಬಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಾಯಿತು.
ವೇದಿಕೆಯಲ್ಲಿ ಶಿಕ್ಷಕರಾದ ಜವರಯ್ಯ, ಕಾಂತ ಇತರರಿದ್ದರು.
ವರದಿ : ದಿನೇಶ್ ಮಾಲಂಬಿ (ಶನಿವಾರಸಂತೆ)