ನಾಪೋಕ್ಲು ಫೆ.12 : ಕೊಡವ ಕೌಟುಂಬಿಕ ಹಾಕಿ ಉತ್ಸವ ವಿಶ್ವದ ಗಮನ ಸೆಳೆದಿದ್ದು, ಅನೇಕ ಕ್ರೀಡಾಪಟುಗಳು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಉತ್ಸವದ ಮೂಲಕ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸರ್ಕಾರ ಆರ್ಥಿಕ ನೆರವನ್ನು ನೀಡುತ್ತಿದೆ ಎಂದು ಶಾಸಕ ಕೆ.ಜಿ.ಬೋಪಯ್ಯ ತಿಳಿಸಿದ್ದಾರೆ.
ನಾಪೋಕ್ಲು ಕೊಡವ ಸಮಾಜದ ಸಭಾಂಗಣದಲ್ಲಿ ನಡೆದ ಅಪ್ಪಚೆಟ್ಟೋಳಂಡ ಕೌಟುಂಬಿಕ ಹಾಕಿ ಉತ್ಸವದ ಮಾಹಿತಿ ಕೈಪಿಡಿ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೌಟುಂಬಿಕ ಹಾಕಿ ಉತ್ಸವಕ್ಕಾಗಿ ಸರ್ಕಾರ ಅನುದಾನ ಘೋಷಿಸಿದ್ದು, ಆಯೋಜಕರು ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. 1997 ರಲ್ಲಿ ಕೊಡಗಿನಲ್ಲಿ ಕೊಡವ ಹಾಕಿ ಉತ್ಸವ ಆರಂಭವಾಗಿದ್ದು, ಕುಟುಂಬಗಳು ಉತ್ಸವವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿವೆ. ಈ ಹಿಂದಿನ ಕೊಡವ ಹಾಕಿ ಉತ್ಸವಕ್ಕೆ ಸರ್ಕಾರ 50 ಲಕ್ಷ ರೂ. ಬಿಡುಗಡೆ ಮಾಡಿತ್ತು. ಇದೀಗ ಸರ್ಕಾರ ಒಂದು ಕೋಟಿ ರೂ. ಬಿಡುಗಡೆ ಮಾಡಿದೆ. ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ಜನಾಂಗದವರು ಕ್ರೀಡಾಕೂಟಗಳನ್ನು ನಡೆಸುತ್ತಿದ್ದು, ಸಮಾಜದ ಒಗ್ಗೂಡುವಿಕೆ ಸಾಧ್ಯವಾಗಿದೆ. ಹಾಕಿ ಉತ್ಸವಕ್ಕೆ ಶಾಶ್ವತ ಅನುದಾನ ಸಿಗುವಂತಾಗಬೇಕು ಎಂದರು.
ಹಾಕಿ ಕರ್ನಾಟಕದ ಕಾರ್ಯದರ್ಶಿ ಮಾಜಿ ಒಲಂಪಿಯನ್ ಡಾ.ಎ.ಬಿ.ಸುಬ್ಬಯ್ಯ ಮಾತನಾಡಿ ಕ್ರೀಡಾಕೂಟಗಳನ್ನು ನಡೆಸುವುದರಿಂದ ಜಿಲ್ಲೆಯ ಮಕ್ಕಳಿಗೆ ಹಾಗೂ ಯುವ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿದಂತ್ತಾಗುತ್ತದೆ ಎಂದು ತಿಳಿಸಿದರು.
ಅಪ್ಪಚೆಟ್ಟೋಳಂಡ ಹಾಕಿ ಉತ್ಸವ ಆಯೋಜನಾ ಸಮಿತಿ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಮಾತನಾಡಿ ಕೊಡವ ಕೌಟುಂಬಿಕ ಹಾಕಿ ಉತ್ಸವ ಈಗಾಗಲೇ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದಿದೆ. ಗಿನ್ನಿಸ್ ದಾಖಲೆಗಾಗಿ ವಿಶೇಷ ಪ್ರಯತ್ನ ಮಾಡಲಾಗುತ್ತಿದೆ. ಭಾರತ ತಂಡವನ್ನು ಪ್ರತಿನಿಧಿಸಿದ ಕೊಡಗಿನ ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಆಟಗಾರರನ್ನು ಹಾಕಿ ಉತ್ಸವದ ಸಂದರ್ಭ ಗೌರವಿಸಲಾಗುವುದು ಎಂದರು.
ಮಾ.17 ರಿಂದ ಏ.10 ರವರೆಗೆ 23 ದಿನಗಳ ಕಾಲ ಹಾಕಿ ಉತ್ಸವವನ್ನು ಆಯೋಜಿಸಲಾಗಿದೆ. ಪ್ರತಿದಿನ ಮೂರು ಮೈದಾನಗಳಲ್ಲಿ 24 ಪಂದ್ಯಗಳು ನಡೆಯಲಿವೆ. 2018 ರಲ್ಲಿ 230 ತಂಡಗಳು ಪಾಲ್ಗೊಂಡಿದ್ದು, ಈ ಬಾರಿ 350 ತಂಡಗಳು ಸೆಣಸಾಡುವ ನೀರಿಕ್ಷೆ ಇದೆ ಎಂದು ಹೇಳಿದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಕಲಾವಿದೆ ರಾಣಿ ಮಾಚಯ್ಯ ಹಾಗೂ ಹಾಕಿ ಉತ್ಸವದ ಲಾಂಛನವನ್ನು ರಚಿಸಿದ ಸುಳ್ಳಿಮಾಡ ದರ್ಶನ್ ಪೂವಪ್ಪ ಅವರನ್ನು ಸನ್ಮಾನಿಸಲಾಯಿತು. ಒಲಂಪಿಯನ್ ಗಳಾದ ಡಾ.ಎ.ಬಿ.ಸುಬ್ಬಯ್ಯ ಹಾಗೂ ಬಾಳೆಯಡ ಕೆ.ಸುಬ್ಬಯ್ಯ ಮಾಹಿತಿ ಕೈಪಿಡಿ ಬಿಡುಗಡೆ ಮಾಡಿ ಶುಭ ಹಾರೈಸಿದರು.
ಅಪ್ಪಚೆಟ್ಟೋಳಂಡ ಕುಟುಂಬದ ಪಟ್ಟೆದಾರ ಮಿಟ್ಟು ಈರಪ್ಪ ಅವರು ಅಧ್ಯಕ್ಷತೆ ವಹಿಸಿದ್ದರು. ಕೊಡವ ಹಾಕಿ ಕೂರ್ಗ್ ಅಸೋಸಿಯೇಷನ್ ಅಧ್ಯಕ್ಷ ಮೇಕೇರಿರ ರವಿ ಪೆಮ್ಮಯ್ಯ, ಉಪಾಧ್ಯಕ್ಷ ಬಡಕಡ ದೀನ ಪೂವಯ್ಯ, ನಿರ್ದೇಶಕ ಮಾಳೇಟಿರ ಶ್ರೀನಿವಾಸ್, ಕೊಡವ ಹಾಕಿ ಅಸೋಸಿಯೇಷನ್ ನ ಪಳಂಗಂಡ ಲವ, ರಾಜಾ ಭೀಮಯ್ಯ, 2024 ರ ಹಾಕಿ ಉತ್ಸವದ ಆಯೋಜನ ಸಮಿತಿ ಅಧ್ಯಕ್ಷ ಕುಂಡ್ಯೋಳಂಡ ರಮೇಶ್ ಮುದ್ದಯ್ಯ ಮತ್ತಿತರರು ಉಪಸ್ಥಿತರಿದ್ದರು.
ಕಲಿಯಂಡ ಬೀನಾ ನವೀನ್ ಪ್ರಾರ್ಥಿಸಿ, ಬಾಳೆಯಡ ದಿವ್ಯ ಮಂದಪ್ಪ ನಿರೂಪಿಸಿ, ಕ್ರೀಡಾಕೂಟದ ಕಾರ್ಯದರ್ಶಿ ಅಪ್ಪಚೆಟ್ಟೋಳಂಡ ಮಿಥುನ್ ಮಾಚಯ್ಯ ವಂದಿಸಿದರು. (ವರದಿ : ದುಗ್ಗಳ ಸದಾನಂದ)
Breaking News
- *ದೇಶ ದ್ರೋಹದ ಪ್ರಕರಣ ದಾಖಲಿಸಲು ಕೆ.ಜಿ.ಬೋಪಯ್ಯ ಆಗ್ರಹ*
- *ಬಿಜೆಪಿ, ಜೆಡಿಎಸ್ ಗೆ ಜನ ತಕ್ಕ ಪಾಠ ಕಲಿಸಿದ್ದಾರೆ : ಎಂ.ಎ.ಕಲೀಲ್ ಬಾಷ*
- *ಕೆವಿ ಎನ್ಸಿಸಿ ಕೆಡೆಟ್ ಗಳಿಂದ ಕಾಯ೯ಪ್ಪ ಪ್ರತಿಮೆ ಸ್ವಚ್ಛತೆ*
- *ಸೋಮವಾರಪೇಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ*
- *ಕರ್ನಾಟಕ ಉಪ ಚುನಾವಣೆ : ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ*
- *ಮಿಸ್ಟಿ ಹಿಲ್ಸ್ ನಿಂದ ಮಕ್ಕಳಿಗೆ ಸಾಹಸಕ್ರೀಡೆ*
- *ವಿಟಿಯು ರಾಜ್ಯಮಟ್ಟದ ಕಬಡ್ಡಿ : ಪುತ್ತೂರು ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ತಂಡ ದ್ವಿತೀಯ*
- *ವೀರ ಸೇನಾನಿಗಳಿಗೆ ಅಗೌರವ : ಆಮ್ ಆದ್ಮಿ ಪಾರ್ಟಿ ಖಂಡನೆ*
- *ವೀರ ಸೇನಾನಿಗಳಿಗೆ ಅಗೌರವ : ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ*
- *ವಿರಾಜಪೇಟೆ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯಿಂದ ಸ್ಥಳ ಪರಿಶೀಲನೆ*