ಮಡಿಕೇರಿ ಫೆ.12 : ಪ್ರಶಸ್ತಿ ವಿಜೇತ ನಿರ್ದೇಶಕಿ ಕೊಡಗಿನ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಅವರು ನಿರ್ದೇಶಿಸಿರುವ 2ನೇ ಕನ್ನಡ ಚಲನಚಿತ್ರ “ಕಂದೀಲು” ಚಿತ್ರೀಕರಣ ಪೂರ್ಣಗೊಂಡಿದೆ.
ಸ್ವಸ್ತಿಕ್ ಎಂಟರ್‌ಟೈನ್ಮೆಂಟ್ ನ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಅವರು ಚಿತ್ರವನ್ನು ನಿರ್ಮಿಸಿದ್ದು, ರಾಜ್ಯದ ವಿವಿಧೆಡೆ ಚಿತ್ರೀಕರಣ ಮಾಡಲಾಗಿದೆ.
“ಕಂದೀಲು” ಎಂದರೆ ಬೆಳಕಿನ ದೀಪ ಎಂದರ್ಥ, ಈ ಚಿತ್ರ ರೈತರ ಬದುಕಿನ ಮೇಲೆ ಬೆಳಕು ಚೆಲ್ಲಿದೆ. ಸಂಕಷ್ಟದಲ್ಲಿರುವ ರೈತ ಕುಟುಂಬವೊಂದರ ಬದುಕನ್ನು ಸಣ್ಣದೊಂದು ಬೆಳಕು ಹಸನಾಗಿಸುವ ಕಥಾಹಂದರ ಈ ಚಿತ್ರದಲ್ಲಿದೆ.
ಸಮಾಜಿಕ ಕಳಕಳಿಯ ಚಿತ್ರಗಳ ನಿರ್ಮಾಣ ಹೆಚ್ಚು ಖುಷಿ ಕೊಡುತ್ತದೆ ಎಂದು ನಿರ್ಮಾಪಕ ಪ್ರಕಾಶ್ ಕಾರ್ಯಪ್ಪ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ನನಗೆ ದೊರೆತ ಅತುತ್ತಮ ನಿರ್ದೇಶಕಿ ಪ್ರಶಸ್ತಿ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ. “ಕಂದೀಲು” ಚಿತ್ರ ಉತ್ತಮವಾಗಿ ಮೂಡಿ ಬಂದಿದೆ, ಎರಡನೇ ಚಿತ್ರ ನಿರ್ದೇಶನ ಸುಲಭವಾಗಿತ್ತು ಎಂದು ನಿರ್ದೇಶಕಿ ಯಶೋಧ ಪ್ರಕಾಶ್ ಹೇಳಿದ್ದಾರೆ.
“ಕಂದೀಲು” ಚಿತ್ರದ ಮುಖ್ಯಪಾತ್ರದಲ್ಲಿ ಕಾಂತಾರಾ ಖ್ಯಾತಿಯ ಪ್ರಭಾಕರ ಬ.ಕುಂದರ ನಟಿಸಿದ್ದಾರೆ. ಉಳಿದಂತೆ ಗುರುತೇಜಸ್, ವಿನಿತಾ ರಾಜೇಶ್, ರೋಹಿಣಿ, ಖುಷಿ ಕಾವೇರಮ್ಮ, ರತ್ನಾ, ಹರಿಣಿ ವಿಜಯ್, ವೆಂಕಟೇಶ್ ಪ್ರಸಾದ್, ರಮೇಶ್ ಕೊಡ್ಲು, ಬಸವರಾಜ್ ಮೈಸೂರು, ಅಡುಗೋಡಿ ಶ್ರೀನಿವಾಸ್, ಮಂಜುನಾಥ್, ಹನುಮಂತ, ಬಂಗಾರಶೆಟ್ಟಿ ಮುದವಾಡಿ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.
ಶ್ರೀ ಸುರೇಶ್ ಸಂಗೀತ, ಪಿ.ವಿ.ಆರ್.ಸ್ವಾಮಿ ಛಾಯಾಗ್ರಹಣ ಚಿತ್ರಕ್ಕಿದ್ದು, ಕಥೆ ಚಿತ್ರಕಥೆ ಎನ್.ನಾಗೇಶ್ ಒದಗಿಸಿದ್ದಾರೆ. ಕನಕಪುರ, ಗೂಗಾರೇದೊಡ್ಡಿ ಮತ್ತಿತರ ಊರುಗಳಲ್ಲಿ “ಕಂದೀಲು” ಚಿತ್ರೀಕರಣಗೊಂಡಿದೆ.











