ಮಡಿಕೇರಿ ಫೆ.14 : ಪೊನ್ನಂಪೇಟೆ ತಾಲೂಕಿನ ಕೆ.ಬಾಡಗ ಗ್ರಾಮದ ಚೂರಿಕಾಡು ವ್ಯಾಪ್ತಿಯಲ್ಲಿ ಇಬ್ಬರು ವ್ಯಕ್ತಿಗಳ ಜೀವ ಬಲಿ ಪಡೆದ ವ್ಯಾಘ್ರನನ್ನು ಮಂಗಳವಾರ ಮಧ್ಯಾಹ್ನದ ವೇಳೆಗೆ ಜೀವಂತವಾಗಿ ಸೆರೆ ಹಿಡಿಯಲಾಗಿದೆ. ಮತ್ತಿಗೋಡು ಸಾಕಾನೆ ಶಿಬಿರದ ಅಭಿಮನ್ಯು ಆನೆಯ ಸಹಾಯದಿಂದ ಒಟ್ಟು 4 ಸಾಕಾನೆಗಳು, 150ಕ್ಕೂ ಹೆಚ್ಚು ಅರಣ್ಯ ಇಲಾಖೆಯ ನುರಿತ ಸಿಬ್ಬಂದಿಗಳು ನಾಣಚ್ಚಿ ಗೇಟ್ ಬಳಿ ಹುಲಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗಳವಾರ ಬೆಳಿಗ್ಗೆ 6 ಗಂಟೆಯಿAದ ಸಾಕಾನೆ ಅಭಿಮನ್ಯು ನೇತೃತ್ವದಲ್ಲಿ ಚಿಕ್ಕಭೀಮ, ದೊಡ್ಡಭೀಮ, ಅಶ್ವತ್ಥಾಮ ಹಾಗೂ ಶ್ರೀಕಂಠ ಆನೆಗಳ ಸಹಾಯದಿಂದ ನಾಗರಹೊಳೆ ಅರಣ್ಯಕ್ಕೆ ಹೊಂದಿಕೊAಡಿರುವ ಪ್ರದೇಶಗಳಲ್ಲಿ ಕೂಂಬಿAಗ್ ಕಾರ್ಯಾಚರಣೆ ನಡೆಸಲಾಯಿತು. ಹುಲಿ ಹೆಜ್ಜೆಯ ಜಾಡು ಅರಸಿದ ಕೂಂಬಿAಗ್ ತಂಡ ಮಧ್ಯಾಹ್ನ 2.30ರ ವೇಳೆಗೆ ನಾಣಚ್ಚಿ ಗೇಟ್ ಬಳಿ ವ್ಯಾಘ್ರವನ್ನು ಮೊದಲಿಗೆ ಪತ್ತೆ ಹಚ್ಚಿತ್ತು. ಈ ವೇಳೆ ಮಾನವ ಜೀವ ಬಲಿ ಪಡೆದ ಹುಲಿಯ ಗುರುತನ್ನು ಖಾತರಿಪಡಿಸಲಾಯಿತು. ಬಳಿಕ ಟೈಗರ್ ಸ್ಕಾ÷್ವಡ್‌ನ ವೈದ್ಯಾಧಿಕಾರಿ ಡಾ.ರಂಜನ್ ಅವರು ಆನೆ ಮೇಲಿಂದ ಅರವಳಿಕೆ ಚುಚ್ಚು ಮದ್ದನ್ನು ಹುಲಿಗೆ ಡಾಟ್ ಮಾಡಿದರು. ಈ ವೇಳೆ ಹುಲಿ ಸ್ಥಳದಿಂದ ಕೆಲ ದೂರು ಓಡಿ ಕುಸಿದು ಬಿದ್ದಿದೆ. ಸಂಪೂರ್ಣವಾಗಿ ಪ್ರಜ್ಞೆ ತಪ್ಪಿರುವುದನ್ನು ಖಾತರಿಪಡಿಸಿಕೊಂಡು ಹುಲಿಯನ್ನು ಸೆರೆ ಹಿಡಿಯಲಾಯಿತು.
::: ಮೈಸೂರಿಗೆ ಸ್ಥಳಾಂತರ :::
ಇದೀಗ ಸೆರೆ ಸಿಕ್ಕ ಹೆಣ್ಣು ಹುಲಿ ಅಂದಾಜು 11 ರಿಂದ 12 ವರ್ಷದ್ದಾಗಿದೆ ಎಂದು ಅರಣ್ಯ ಪಶುವೈದ್ಯಾಧಿಕಾರಿ ತಿಳಿಸಿದ್ದಾರೆ. ಹುಲಿಯ ದೇಹವನ್ನು ಪರಿಶೀಲನೆ ನಡೆಸಿದ ಸಂದರ್ಭ ಅದರ ಮುಂಗೈನ ಭುಜದ ಭಾಗದಲ್ಲಿ ಬಲವಾದ ಗಾಯದ ಗುರುತುಗಳು ಪತ್ತೆಯಾಗಿವೆ. ಮುಂಗೈನಲ್ಲಿ ಆಳವಾದ ಗಾಯಗಳಾಗಿದ್ದರಿಂದ ಕಾಡು ಪ್ರಾಣಿಗಳನ್ನು ಬೇಟೆಯಾಡಲು ಸಾಧ್ಯವಾಗದೇ, ಮಾನವನ ಮೇಲೆ ದಾಳಿ ನಡೆಸಿ ಜೀವ ಹಾನಿಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಸೆರೆಸಿಕ್ಕ ಹುಲಿಗೆ ಚಿಕಿತ್ಸೆಯ ಅಗತ್ಯವಿರುವ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಕೂರ್ಗಳ್ಳಿಯಲ್ಲಿರುವ ಹುಲಿ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು.
::: ಕೂಂಬಿಂಗ್ ಮುಂದುವರಿಯಲಿದೆ :::
ಇನ್ನು ಮಾನವ ಜೀವ ಬಲಿ ಪಡೆದ ಹುಲಿಯ ಬಗ್ಗೆ ಪ್ರಾಥಮಿಕ ಮಾಹಿತಿ ಆಧರಿಸಿ ಒಂದು ಹುಲಿಯನ್ನು ಸೆರೆ ಹಿಡಿದಿದ್ದರೂ, ಮುಂದಿನ 3-4 ದಿನಗಳ ಕಾಲ ಕೂಂಬಿAಗ್ ಕಾರ್ಯಾಚರಣೆ ಮುಂದುವರೆಯಲಿದೆ. ಆ ಮೂಲಕ ಮಾನವ ಜೀವ ಹಾನಿ ಮಾಡಿದ ಹುಲಿ ಇದುವೇ ಎಂದು ಖಚಿತವಾಗಲಿದೆ ಎಂದು ಕೊಡಗು ವೃತ್ತದ ಸಿಸಿಎಫ್ ನಿರಂಜನ್ ಮೂರ್ತಿ ಸ್ಪಷ್ಟಪಡಿಸಿದ್ದಾರೆ.
ಮಾನವ ಜೀವಹಾನಿಯಾದ ಸ್ಥಳಗಳು, ಹುಲಿ ಸಂಚರಿಸಿದ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಬೇಕಿದೆ ಎಂದು ಹೇಳಿದ ಸಿಸಿಎಫ್ ನಿರಂಜನ್ ಮೂರ್ತಿ, ಕಾಫಿ ತೋಟಗಳಲ್ಲಿ ಕಾಫಿ ಕುಯಿಲು, ತೋಟಗಳಲ್ಲಿ ಸಂಚರಿಸುವುದನ್ನು ಮೂರ್ನಾಲ್ಕು ದಿನಗಳ ಕಾಲ ನಿಷೇಧಿಸಬೇಕಿದೆ. ಈ ಅವಧಿಯಲ್ಲಿ ಕೂಂಬಿಂಗ್ ಕಾರ್ಯ ನಡೆಸಲಾಗುತ್ತದೆ ಎಂದರು.
4 ಸಾಕಾನೆಗಳು, 150 ಮಂದಿ ಅರಣ್ಯ ಇಲಾಖೆ ಸಿಬ್ಬಂದಿಗಳು ಮೇಲಾಧಿಕಾರಿಗಳ ನಿರ್ದೇಶನದಂತೆ ಕಾರ್ಯಾಚರಣೆ ನಡೆಸಿ ಹುಲಿಯನ್ನು ಸೆರೆ ಹಿಡಿದಿದ್ದಾರೆ ಎಂದು ನಾಗರಹೊಳೆ ಎಸಿಎಫ್ ಗೋಪಾಲ್ ಮಾಹಿತಿ ನೀಡಿದರು.
ಕಾರ್ಯಾಚರಣೆಯಲ್ಲಿ ವನ್ಯಜೀವಿ ವಲಯದ ಹಿರಿಯ ಅರಣ್ಯ ಅಧಿಕಾರಿಗಳಾದ ಕುಮಾರ್ ಪುಷ್ಕರ್, ಹರ್ಷ ಕುಮಾರ್, ನಾಗರಹೊಳೆ ಅರಣ್ಯದ ಝೀಶಾನ್, ವೈದ್ಯರಾದ ಡಾ.ಚಿಟ್ಟಿಯಪ್ಪ, ಡಾ.ರಮೇಶ್, ಕೊಡಗು ಸಿಸಿಎಫ್ ನಿರಂಜನ್ ಮೂರ್ತಿ, ಚಾಮರಾಜನಗರ, ಹೆಚ್.ಡಿ.ಕೋಟೆ, ತಿತಿಮತಿ ಅರಣ್ಯ ಸಿಬ್ಬಂದಿಗಳು, ಆರ್.ಆರ್.ಟಿ ತಂಡ, ಕೊಡಗು ಪೊಲೀಸ್ ಶ್ವಾನ ದಳ, ಕುಟ್ಟ ಪೊಲೀಸ್ ಠಾಣೆಯ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ಪಾಲ್ಗೊಂಡಿದ್ದರು.
::: 154 ನೇ ಕಾರ್ಯಾಚರಣೆ :::
ಇನ್ನು ಮತ್ತಿಗೋಡು ಸಾಕಾನೆ ಶಿಬಿರದ ಕ್ಯಾಪ್ಟನ್ ಅಭಿಮನ್ಯು, ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಕೂಂಬಿAಗ್ ನೇತೃತ್ವ ವಹಿಸುವ ಮೂಲಕ ಪ್ರಮುಖ ಪಾತ್ರವಹಿಸಿದ್ದ. ಇಂದಿನ ಹುಲಿ ಸೆರೆ ಕಾರ್ಯಾಚರಣೆ ಮೂಲಕ ಅಭಿಮನ್ಯು ತನ್ನ 154ನೇ ಯಶಸ್ವಿ ಕಾರ್ಯಾಚರಣೆ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರನಾದ.
::: ಆದೇಶ :::
ಎರಡು ಮಾನವ ಜೀವಗಳನ್ನು ಬಲಿ ಪಡೆದ ಹುಲಿಯನ್ನು ಗುರುತಿಸಿ ಸೆರೆ ಹಿಡಿಯುವಂತೆ ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ವನ್ಯಜೀವ ವಿಭಾಗ) ಹಾಗೂ ಪ್ರಧಾನ ವನ್ಯಜೀವಿ ಪರಿಪಾಲಕರು ಫೆ.13ರಂದು ಆದೇಶ ಹೊರಡಿಸಿದ್ದರು. ಈ ಆದೇಶದಲ್ಲಿ ಮಾನವ ಜೀವ ಬಲಿ ಪಡೆದ ಹುಲಿಯನ್ನು ಸೆರೆ ಹಿಡಿಯುವುದಕ್ಕೆ ಮೊದಲ ಪ್ರಾಧಾನ್ಯತೆ ನೀಡಬೇಕು. ಕಾರ್ಯಾಚರಣೆ ಸಂದರ್ಭ ಹುಲಿ ಮರಳಿ ದಾಳಿಗೆ ಯತ್ನಿಸುವುದು, ಸೆರೆ ಅಸಾಧ್ಯವಾಗುವುದು ಅಥವಾ ಮತ್ತೊಂದು ಜೀವ ಬಲಿ ಪಡೆಯುವ ಎಲ್ಲಾ ಸಾಧ್ಯತೆಗಳು ಇದ್ದಲ್ಲಿ ಮಾತ್ರವೇ ಅಂತಿಮ ಪ್ರಯತ್ನವಾಗಿ ಗುಂಡಿಕ್ಕುವಂತೆ ಸ್ಪಷ್ಟ ನಿರ್ದೇಶನ ಹೊರಡಿಸಲಾಗಿತ್ತು. ಕಾರ್ಯಾಚರಣೆ ಸಂದರ್ಭ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಸೂಚಿಸಿರುವ ಎಲ್ಲಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆಯೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿತ್ತು.
::: ದೇಹದಲ್ಲಿ ಗಾಯ :::
ಇಂದು ನಾಣಚ್ಚಿ ಭಾಗದಲ್ಲಿ ಸೆರೆಯಾದ ಹುಲಿಯ ದೇಹದಲ್ಲಿ ಗಂಭೀರ ಗಾಯದ ಗುರುತುಗಳು ಪತ್ತೆಯಾಗಿವೆ. ಇಂತಹ ಹುಲಿಗಳು ಸಹಜವಾಗಿಯೇ ಮಾನವನ ಜೊತೆ ಸಂಘರ್ಷ ನಡೆಸುತ್ತವೆ. ನಾಣಚ್ಚಿ ಹಾಡಿ ಸಹಿತ ಬಿ.ಡಿ. ಕುಪ್ಪೆ ವ್ಯಾಪ್ತಿಯಲ್ಲಿ ಮಾನವ ಸಂಘರ್ಷಕ್ಕೆ ಇಳಿದಿದ್ದ ಮತ್ತೊಂದು ಹುಲಿ ಸಹಿತ ಒಟ್ಟು 2 ಹುಲಿಗಳನ್ನು ಸೆರೆಹಿಡಿಯಲಾಗಿದೆ. ಈ ಹುಲಿಗಳನ್ನು ಕೂರ್ಗಳ್ಳಿ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ನಿರಂಜನ್ ಮೂರ್ತಿ
ಸಿಸಿಎಫ್ ಕೊಡಗು










