ಮಡಿಕೇರಿ ಫೆ.16 : ಇತ್ತೀಚಿನ ವರ್ಷಗಳಲ್ಲಿ ಕೊಡಗು ಜಿಲ್ಲೆಯಲ್ಲಿ ವನ್ಯಜೀವಿಗಳ ಉಪಟಳ ಮಿತಿ ಮೀರಿದ್ದು, ಮಾನವ ಜೀವಹಾನಿ ನಿರಂತರವಾಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಖ್ಯಮಂತ್ರಿಗಳು ಕೊಡಗಿನಲ್ಲಿ ವಿಶೇಷ ಸಭೆ ನಡೆಸಬೇಕು ಎಂದು ಆಮ್ ಆದ್ಮಿ ಪಾರ್ಟಿಯ ಪ್ರಚಾರ ಸಮಿತಿಯ ರಾಜ್ಯಾಧ್ಯಕ್ಷ ಬ್ರಿಜೇಶ್ ಕಾಳಪ್ಪ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸರ್ಕಾರದ ದಿವ್ಯ ನಿರ್ಲಕ್ಷ್ಯದಿಂದ ಇತ್ತೀಚೆಗೆ ಇಬ್ಬರು ಅಮಾಯಕರು ಹುಲಿ ದಾಳಿಗೆ ಬಲಿಯಾಗಿದ್ದಾರೆ. ಕಳೆದ 3- 4 ವರ್ಷಗಳಿಂದ ಕೊಡಗಿನಲ್ಲಿ ವನ್ಯಜೀವಿಗಳ ದಾಳಿ ಮಿತಿ ಮೀರಿದ್ದರೂ ರಾಜ್ಯ ಸರ್ಕಾರ ಮತ್ತು ಸ್ಥಳೀಯ ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸದೆ ಅಸಡ್ಡೆ ತೋರಿದ ಪರಿಣಾಮ ಜನ ನಿತ್ಯ ಬವಣೆ ಅನುಭವಿಸುವಂತ್ತಾಗಿದೆ ಎಂದು ಆರೋಪಿಸಿದ್ದಾರೆ.
ಇಲ್ಲಿಯವರೆಗೆ ಯಾವುದೇ ಅರಣ್ಯ ಸಚಿವರು ಗಂಭೀರ ಸಮಸ್ಯೆಯಾಗಿರುವ ವನ್ಯಜೀವಿಗಳ ದಾಳಿ ಕುರಿತು ಕೊಡಗಿನಲ್ಲಿ ವಿಶೇಷ ಸಭೆ ನಡೆಸಿಲ್ಲ. ಜಿಲ್ಲೆಯ ಕೃಷಿಕ ವರ್ಗವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಇಲ್ಲಿನ ಸಮಸ್ಯೆಗಳ ಬಗ್ಗೆ ಗಂಭೀರ ಚಿಂತನೆಯನ್ನು ಮಾಡಿಲ್ಲ್ಲ. ವನ್ಯಜೀವಿ ಉಪಟಳ ತಡೆಗೆ ಶಾಶ್ವತ ಯೋಜನೆ ರೂಪಿಸುವ ಉತ್ಸಾಹ ತೋರಿಲ್ಲ. ಕಾಫಿ ಬೆಳೆಯ ಮೂಲಕ ದೇಶದ ಆರ್ಥಿಕ ಕ್ಷೇತ್ರಕ್ಕೆ ಅತ್ಯಧಿಕ ಸಂಪನ್ಮೂಲವನ್ನು ಒದಗಿಸಿಕೊಡುತ್ತಿದ್ದರೂ ಕೊಡಗು ಜಿಲ್ಲೆಯ ಬೆಳೆಗಾರರ ಬಗ್ಗೆ ಸರ್ಕಾರದ ತಾತ್ಸಾರ ಮುಂದುವರೆದಿದೆ.
ಇತ್ತೀಚೆಗೆ ಟಿ.ನರಸೀಪುರದಲ್ಲಿ ಚಿರತೆ ದಾಳಿ ನಡೆಸಿದಾಗ ಇಡೀ ಸರ್ಕಾರವೇ ಸಹಾಯಹಸ್ತ ಚಾಚುವ ರೀತಿಯಲ್ಲಿ ವರ್ತಿಸಿತು. ವಿಶೇಷ ಕಾಳಜಿ ತೋರಿ ಸಮಸ್ಯೆಗೆ ಸ್ಪಂದಿಸುವ ಭರವಸೆ ನೀಡಿತು. ರಾಜ್ಯದ ಯಾವುದೇ ಭಾಗದಲ್ಲಿ ವನ್ಯಜೀವಿಗಳು ದಾಳಿ ಮಾಡಿದಾಗಲೂ ವಿಶೇಷ ಕಾಳಜಿ ತೋರುವ ಸರ್ಕಾರ ಕೊಡಗು ಜಿಲ್ಲೆಯ ಬಗ್ಗೆ ಮಾತ್ರ ಯಾಕೆ ನಿರ್ಲಕ್ಷ್ಯ ತೋರುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ಹುಲಿದಾಳಿಗೆ ಸಿಲುಕಿ ಇಬ್ಬರು ಅಮಾಯಕರು ಸಾವನ್ನಪ್ಪಿದರೂ ಸರ್ಕಾರದ ಒಬ್ಬನೇ ಒಬ್ಬ ಪ್ರತಿನಿಧಿ ಸ್ಥಳಕ್ಕೆ ಬಂದು ಸಾಂತ್ವನ ಹೇಳಿಲ್ಲ. ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸುವ ಭರವಸೆ ಮೂಡಿಸಿಲ್ಲ. ಹುಲಿಯೊಂದನ್ನು ಸೆರೆ ಹಿಡಿದು ಬೀಸುವ ದೊಣ್ಣೆಯಿಂದ ಅರಣ್ಯ ಇಲಾಖೆ ತಪ್ಪಿಸಿಕೊಂಡಿದೆ. ಜನರ ಪ್ರತಿರೋಧ ತಣ್ಣಗಾಗಿದೆ ಎಂದು ಸರ್ಕಾರವೂ ತೃಪ್ತಿಯಿಂದ ಇದೆ. ಆದರೆ ಇದು ಹೆಚ್ಚು ದಿನ ನಡೆಯುವುದಿಲ್ಲ, ಕೊಡಗಿನ ಜನರ ತಾಳ್ಮೆಗೂ ಒಂದು ಮಿತಿ ಇದೆ. ಎಲ್ಲರಂತೆ ಇಲ್ಲಿನವರ ಜೀವ ಮತ್ತು ಜೀವನಕ್ಕೂ ಬೆಲೆ ಇದೆ, ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಜನ ರೊಚ್ಚಿಗೇಳುವ ಮೊದಲು ಮುಖ್ಯಮಂತ್ರಿಗಳು ಜಿಲ್ಲೆಗೆ ಭೇಟಿ ನೀಡಿ ವನ್ಯಜೀವಿ ಸಮಸ್ಯೆ ಕುರಿತು ವಿಶೇಷ ಸಭೆ ನಡೆಸುವುದು ಸೂಕ್ತ ಎಂದು ಬ್ರಿಜೇಶ್ ಕಾಳಪ್ಪ ತಿಳಿಸಿದ್ದಾರೆ.
ಈಗಾಗಲೇ ನ್ಯಾಯಾಲಯದಲ್ಲಿ ಇತ್ಯರ್ಥವಾಗಿರುವ ಜಮ್ಮಾ ಜಾಗದ ವಿಚಾರವನ್ನು ಸರ್ಕಾರ ಮತ್ತೆ ಕೆದಕಿ ಕೊಡಗಿನ ಜನರಲ್ಲಿ ಗೊಂದಲ ಸೃಷ್ಟಿಸುವುದನ್ನು ಬಿಡಬೇಕು. ವನ್ಯಜೀವಿಗಳ ಉಪಟಳ ತಡೆ ಮತ್ತು ಅವುಗಳ ಆಹಾರದ ಕೊರತೆಯ ಕುರಿತು ಗಂಭೀರ ಚಿಂತನೆ ಮಾಡಬೇಕು. ಗುತ್ತಿಗೆ ಆಧಾರದಲ್ಲಿ ಜಮ್ಮಾ ಜಾಗವನ್ನು ನೀಡುತ್ತೇವೆ ಎನ್ನುವ ಅರ್ಥಹೀನ ಹೇಳಿಕೆಗಳನ್ನು ನೀಡುವುದನ್ನು ಜವಾಬ್ದಾರಿಯುತ ಸ್ಥಾನದಲ್ಲಿರುವ ಕಂದಾಯ ಸಚಿವರು ನಿಲ್ಲಿಸಬೇಕು ಎಂದು ಬ್ರಿಜೇಶ್ ಕಾಳಪ್ಪ ಒತ್ತಾಯಿಸಿದ್ದಾರೆ.









