ಜಮ್ಮಾ ಜಾಗದ ವಿಚಾರದಲ್ಲಿ ಸರ್ಕಾರದಿಂದ ಹೊಸ ಸಮಸ್ಯೆ ಸೃಷ್ಟಿ : ಆಮ್ ಆದ್ಮಿ ಆರೋಪ

ಮಡಿಕೇರಿ ಫೆ.16 : ಕಂದಾಯ ಇಲಾಖೆಯಲ್ಲಿರುವ ಮೂಲ ಸಮಸ್ಯೆಗಳನ್ನು ಬಗೆಹರಿಸಬೇಕಾದ ಕಂದಾಯ ಸಚಿವರು ವಿನಾಕಾರಣ ಕೊಡಗಿನ ಜಮ್ಮಾ ಜಾಗದ ವಿಚಾರದಲ್ಲಿ ಹೊಸ ಸಮಸ್ಯೆಯನ್ನು ಸೃಷ್ಟಿಸಲು ಮುಂದಾಗಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿಯ ಜಿಲ್ಲಾಧ್ಯಕ್ಷ ಭೋಜಣ್ಣ ಸೋಮಯ್ಯ ಆರೋಪಿಸಿದ್ದಾರೆ.
ಪತ್ರಿಕಾ ಪ್ರಕರಣ ನೀಡಿರುವ ಅವರು ಇತ್ತೀಚೆಗೆ ರಾಜ್ಯ ಕಂದಾಯ ಸಚಿವರು ಜಮ್ಮಾ ಜಾಗವನ್ನು ಗುತ್ತಿಗೆ ಆಧಾರದಲ್ಲಿ ನೀಡುವುದಾಗಿ ಹೇಳುವ ಮೂಲಕ ಕೊಡಗಿನ ಬೆಳೆಗಾರರಲ್ಲಿ ಆತಂಕ ಮತ್ತು ಗೊಂದಲವನ್ನು ಮೂಡಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಕಂದಾಯ ಇಲಾಖೆಯನ್ನು ಕಾಡುತ್ತಿರುವ ಸಮಸ್ಯೆಗಳನ್ನು ಬಗೆಹರಿಸದೆ ಇದೀಗ ಜಮ್ಮಾ ವಿಚಾರದಲ್ಲಿ ಮತ್ತೊಂದು ಸಮಸ್ಯೆಯನ್ನು ಸೃಷ್ಟಿಸಲು ಮುಂದಾಗಿರುವುದು ಖಂಡನೀಯವೆಂದು ತಿಳಿಸಿದ್ದಾರೆ.
ಜಿಲ್ಲೆಯ ರೈತರು ಕೃಷಿ ಚಟುವಟಿಕೆ ಬಿಟ್ಟು ಸರ್ವೇ, ಪಹಣಿ, ತಿದ್ದುಪಡಿ ಇತ್ಯಾದಿಗಾಗಿ ದಿನವಿಡೀ ನಾಡ ಕಚೇರಿ ಮತ್ತು ತಾಲ್ಲೂಕು ಕಚೇರಿಗೆ ಅಲೆಯುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ಪೌತಿಖಾತೆಗೆ ಆದೇಶ ಬಂದಿದ್ದರು ಇನ್ನೂ ಬಹಳ ಕಡೆ ಅನುಷ್ಠಾನಗೊಂಡಿಲ್ಲ. ಜನ ದಿನವಿಡೀ ಕಚೇರಿಗೆ ಹೋಗಿ ಬರುವುದನ್ನೇ ಮಾಡುತ್ತಿದ್ದು, ದುಡಿಮೆ ಮಾಡುವುದೇ ಕಷ್ಟವಾಗಿದೆ.
ದೇಶಕ್ಕಾಗಿ ಹಗಲಿರುಳೆನ್ನದೆ ದುಡಿದ ಮಾಜಿ ಸೈನಿಕರಿಗೆ ಭೂ ಮಂಜೂರಾತಿ ಇನ್ನೂ ಕೂಡ ಆಗಿಲ್ಲ.
ಕಂದಾಯ ಸಚಿವರು ಗೊಂದಲದ ಹೇಳಿಕೆಗಳನ್ನು ನೀಡುವ ಬದಲು ಕಂದಾಯ ಇಲಾಖೆಯಲ್ಲಿನ ವಿಳಂಬ ನೀತಿ, ಅವ್ಯವಹಾರ ಮತ್ತು ಭ್ರಷ್ಟಾಚಾರಕ್ಕೆ ಮೊದಲು ಕಡಿವಾಣ ಹಾಕಬೇಕು. ಬಾಕಿ ಇರುವ ಕಡತಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಭೋಜಣ್ಣ ಸೋಮಯ್ಯ ಒತ್ತಾಯಿಸಿದ್ದಾರೆ.
