ಮಡಿಕೇರಿ ಫೆ.17 : ಎಲ್ಲಾ ಕ್ಷೇತ್ರ ಮತ್ತು ಎಲ್ಲಾ ವರ್ಗದ ಜನರಿಗೂ ತೃಪ್ತಿಯಾಗಬಲ್ಲ ಅದ್ಭುತವಾದ ಬಜೆಟ್ ನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಂಡಿಸಿದ್ದಾರೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಮಹೇಶ್ ಜೈನಿ ತಿಳಿಸಿದ್ದಾರೆ.
ಕೊಡಗಿನ ಶಾಸಕರುಗಳ ಮನವಿಗೆ ಸ್ಪಂದಿಸಿ ರಸ್ತೆಗಳ ಅಭಿವೃದ್ಧಿಗಾಗಿ ಸುಮಾರು 100 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ನ್ನು ಘೋಷಿಸಿದ್ದಾರೆ. ಮಹಿಳೆಯರು, ವಿದ್ಯಾರ್ಥಿಗಳು, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಹಾಗೂ ಕಾರ್ಮಿಕ ವರ್ಗಕ್ಕೆ ಬರಪೂರ ಕೊಡುಗೆಗಳನ್ನು ನೀಡಿದ್ದಾರೆ. ಕಿಸಾನ್ ಕಾರ್ಡ್ ಹೊಂದಿರುವ ರೈತರಿಗೆ ಭೂಸಿರಿ ಯೋಜನೆಯಡಿ ವಾರ್ಷಿಕ 10ಸಾವಿರ ರೂ., ಶೂನ್ಯ ಬಡ್ಡಿ ದರದಲ್ಲಿ ರೂ.3 ಲಕ್ಷದಿಂದ 5 ಲಕ್ಷದ ವರೆಗೆ ರೈತರಿಗೆ ಸಾಲ, ಆಕಸ್ಮಿಕವಾಗಿ ಮೃತಪಡುವ ರೈತರಿಗೆ ಜೀವನ ಜ್ಯೋತಿ ವಿಮೆಯಡಿ ರೂ.2 ಲಕ್ಷ ನೆರವು, ಕೃಷಿ ಯಂತ್ರೋಕರಣಗಳಿಗೆ ಆರ್ಥಿಕ ನೆರವು, ವಿದ್ಯಾರ್ಥಿನಿಯರಿಗೆ ಹಾಗೂ ಮಹಿಳಾ ಕಾರ್ಮಿಕರಿಗೆ ಉಚಿತ ಬಸ್ ಪಾಸ್, ಅಂಗನವಾಡಿ ಕಾರ್ಯಕರ್ತರಿಗೆ ರೂ.50 ಸಾವಿರ ಸಹಾಯಧನ, ಮಹಿಳೆಯರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ಸೇರಿದಂತೆ ಅನೇಕ ಕೊಡುಗೆಗಳನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ.
ಮಕ್ಕಳ ಅರೋಗ್ಯಕ್ಕಾಗಿ ವಾತ್ಸಲ್ಯ ಯೋಜನೆ, ಗ್ರಾಮ ಪಂಚಾಯತ್ ಸದಸ್ಯರ ಗೌರವ ಧನ 500 ರಿಂದ 1000 ರೂ.ಗಳಿಗೆ ಹೆಚ್ಚಳ, ಭೂ ರಹಿತ ಕಾರ್ಮಿಕರಿಗೆ 500 ರೂ. ಸಹಾಯಧನ ಘೋಷಿಸಿದ್ದಾರೆ. ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳಾದ ಐಐಟಿ, ಐಐಎಂ, ಐಐಎಸ್‌ಸಿ, ಎನ್‌ಐಟಿ ಮುಂತಾದ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ನೀಡುತ್ತಿರುವ 2 ಲಕ್ಷ ರೂ.ಗಳ ಪ್ರೋತ್ಸಾಹಧನವನ್ನು 4 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ.
ಪರಿಶಿಷ್ಟ ಜಾತಿ ಮತ್ತು ಪಂಗಡದ ನಿರುದ್ಯೋಗಿಗಳಿಗೆ ವಾಣಿಜ್ಯ ಬ್ಯಾಂಕುಗಳಿAದ ಪಡೆಯುವ ಗರಿಷ್ಠ 10 ಲಕ್ಷ ರೂ. ವರೆಗಿನ ಸಾಲವನ್ನು ಶೇ. 4ರಷ್ಟು ಬಡ್ಡಿ ದರಲ್ಲಿ ದೊರಕಿಸಲು ಸರ್ಕಾರದಿಂದ ಸಹಾಯಧನ ನೀಡಲಾಗುವುದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ವರ್ಗಗಳಿಗೆ ಸೇರಿದ 10 ಸಾವಿರ ಮಂದಿಗೆ ಭಾರತೀಯ ಸೇನೆಯಲ್ಲಿ ಅಗ್ನಿವೀರರಾಗಿ ನೇಮಕಾತಿ ಹೊಂದಲು ಉಚಿತ ತರಬೇತಿ ನೀಡಲು ಮುಂದಾಗಿರುವುದು ಸರ್ಕಾರದ ಹೆಗ್ಗಳಿಕೆಯಾಗಿದೆ.
ಯುವ ಸಮೂಹ ಸೇರಿದಂತೆ ಎಲ್ಲಾ ವರ್ಗವನ್ನು ವಿಶ್ವಾಸಕ್ಕೆ ತೆಗೆದುಕೊಂಡು ರೂಪಿಸಿರುವ ಜನಪ್ರಿಯ ಬಜೆಟ್ ಇದಾಗಿದೆ ಎಂದು ಮಹೇಶ್ ಜೈನಿ ತಿಳಿಸಿದ್ದಾರೆ.









