ಕುಶಾಲನಗರ ಫೆ.17 : ಕರುವೊಂದು ಕಾಡುಪ್ರಾಣಿಯ ದಾಳಿಗೊಳಗಾಗಿ ಪ್ರಾಣಕಳೆದುಕೊಂಡ ಘಟನೆ ಕೂಡುಮಂಗಳೂರು ಗ್ರಾ.ಪಂ ವ್ಯಾಪ್ತಿಯ ಕೂಡ್ಲೂರು ಬಸವೇಶ್ವರ ಬಡಾವಣೆಯಲ್ಲಿ ನಡೆದಿದೆ. ಕರುವು ಚಿರತೆ ದಾಳಿಗೊಳಗಾರುವ ಬಗ್ಗೆ ಕರುವಿನ ಮಾಲೀಕರು ಸಂಶಯ ವ್ಯಕ್ತಪಡಿಸುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ.
ಬಸವೇಶ್ವರ ಬಡಾವಣೆಯ ಜಿ.ವಿ.ಕುಮಾರ್ ಎಂಬವರ ಕರು ಪ್ರಾಣಿದಾಳಿಗೊಳಗಾಗಿದೆ. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಸ್ಥಳೀಯ ವಾರ್ಡ್ ಸದಸ್ಯ ಕೆ.ಬಿ.ಶಂಶುದ್ಧೀನ್ ಅವರು, ಕೂಡಲೇ ವಲಯ ಅರಣ್ಯಾಧಿಕಾರಿಗಳ ಗಮನಕ್ಕೆ ತಂದರು. ನಂತರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅರಣ್ಯಾ ಇಲಾಖೆಯ ಅಧಿಕಾರಿಗಳು, ಮುಂದಿನ ಕ್ರಮ ಕೈಗೊಂಡರು.
ಈ ಸಂದರ್ಭ ಮಾತನಾಡಿದ ವಾರ್ಡ್ ಸದಸ್ಯ ಕೆ.ಬಿ.ಶಂಶುದ್ಧೀನ್, ಚಿರತೆ ದಾಳಿ ಶಂಕೆ ಇರುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮನವಿ ಮಾಡಲಾಗಿದೆ. ಸ್ಥಳಕ್ಕೆ ಸಿಸಿ ಕ್ಯಾಮರಾ ಅಳವಡಿಸುವ ಬಗ್ಗೆ ಹಾಗೂ ಕಾಡಿಗೆ ಸಿಬ್ಬಂದಿಗಳನ್ನು ಕಳುಹಿಸಿ ಪರಿಶೀಲನೆ ನಡೆಸುವ ಬಗ್ಗೆ ವಲಯ ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕರುವಿಗೆ ಬೇಗನೇ ಪರಿಹಾರ ಒದಗಿಸಿಕೊಡುವ ಬಗ್ಗೆಯೂ ಅಧಿಕಾರಿಗಳಲ್ಲಿ ಮನವಿ ಮಾಡಲಾಗಿದೆ. ಗ್ರಾಮಸ್ಥರು ಆತಂಕಕ್ಕೀಡಾಗದೇ, ರಾತ್ರಿ ವೇಳೆ ಸುರಕ್ಷಿತವಾಗಿರುವಂತೆ ತಿಳಿಸಿದ್ದಾರೆ.
ರಾತ್ರಿ ವೇಳೆ ಕರು ಹಾಗೂ ನಾಯಿಗಳು ಚೀರಾಡುತ್ತಿರುವ ಬಗ್ಗೆ ಮಾಹಿತಿ ನೀಡಿರುವ ಕರುವಿನ ಮಾಲೀಕ, ಕಳೆದ ಕೆಲವು ದಿನಗಳಿಂದ ಚಿರತೆಯ ಕೂಗು ಕೇಳುತ್ತಿರುವ ಬಗ್ಗೆ ಆರೋಪ ವ್ಯಕ್ತಪಡಿಸಿದ್ದಾರೆ. ಕೂಡಲೇ ಪರಿಹಾರ ಒದಗಿಸಿಕೊಡುವಂತೆ ಅವರು ಆಗ್ರಹಿಸಿದ್ದಾರೆ.
ಈ ಸಂದರ್ಭ ಉಪ ವಲಯ ಅರಣ್ಯಾಧಿಕಾರಿ ಅನಿಲ್ ಡಿಸೋಜ, ಅರಣ್ಯ ಸಿಬ್ಬಂದಿ ಮಂಜೇಗೌಡ ಹಾಗೂ ಗ್ರಾಮಸ್ಥರು ಇದ್ದರು.