ಮಡಿಕೇರಿ ಫೆ.18 : ಕೊಡಗು ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನವು ಮಾ. 4 ಮತ್ತು 5 ರಂದು ಗೋಣಿಕೊಪ್ಪಲಿನ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ.
ಈ ಸಮ್ಮೇಳನದ ಲಾಂಛನವನ್ನು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಕೆ.ಜಿ. ಬೋಪಯ್ಯ ಅನಾವರಣಗೊಳಿಸಿದರು.
ಈ ಸಂದರ್ಭ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವಕಾಮತ್, ಗೌರವ ಕಾರ್ಯದರ್ಶಿಗಳಾದ ಎಸ್.ಐ. ಮುನೀರ್ ಅಹ್ಮದ್, ರೇವತಿ ರಮೇಶ್, ಸಮ್ಮೇಳನದ ಹಣಕಾಸು ಸಮಿತಿ ಸಂಚಾಲಕ ಬಿ.ಎನ್. ಪ್ರಕಾಶ್ ಹಾಜರಿದ್ದರು.
ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಬೋಪಯ್ಯ ಅವರು ನೂತನ ಪೊನ್ನಂಪೇಟೆ ತಾಲೂಕಿನಲ್ಲಿ ಮೊದಲ ಬಾರಿ ಜಿಲ್ಲಾ ಸಮ್ಮೇಳನ ನಡೆಯುತ್ತಿದ್ದು, ಇದು ಕನ್ನಡಿಗರ ಹಬ್ಬವಾಗಿದೆ. ಎಲ್ಲಾ ಸಂಘ ಸಂಸ್ಥೆಗಳ, ಸಮುದಾಯಗಳ, ಶಾಲಾ ಕಾಲೇಜು ವಿದ್ಯಾರ್ಥಿಗಳು, ಅಧ್ಯಾಪಕರು, ಕನ್ನಡ ಅಭಿಮಾನಿಗಳು, ಸರ್ಕಾರಿ ಅಧಿಕಾರಿಗಳು ಸೇರಿ ಉತ್ತಮವಾದಂತಹ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಸಂದೇಶ ನೀಡುವಂತಹ ಸಮ್ಮೇಳನ ಇದಾಗಬೇಕು ಎಂದರು.
ಈ ಲಾಂಛನವನ್ನು ಜಿಲ್ಲೆಯ ಹಿರಿಯ ಚಿತ್ರ ಕಲಾವಿದ ಬಿ.ಆರ್ .ಸತೀಶ್ ರಚಿಸಿದ್ದು, ಲಾಂಛನದಲ್ಲಿ ಜಿಲ್ಲೆಯ ಪರಿಸರ ಕೃಷಿ ಪ್ರವಾಸೋದ್ಯಮ ಸಾಹಿತ್ಯ ಎಲ್ಲಾ ವಿಚಾರಗಳನ್ನು ಒಳಪಡಿಸಿದ್ದು ಆಕರ್ಷಕ ಲಾಂಛನ ರಚಿಸಿದ್ದಾರೆ ಎಂದು ಜಿಲ್ಲಾಧ್ಯಕ್ಷ ಎಂ.ಪಿ.ಕೇಶವಕಾಮತ್ ತಿಳಿಸಿದರು.