ಮಡಿಕೇರಿ ಫೆ.18 : ಮಡಿಕೇರಿ ಸಮೀಪದ ಮೇಕೇರಿಯ ಶ್ರೀ ಗೌರಿಶಂಕರ ದೇವಾಲಯದಲ್ಲಿ ಮಹಾಶಿವರಾತ್ರಿ ಮಹೋತ್ಸವ ಶನಿವಾರ ಶ್ರದ್ಧಾಭಕ್ತಿಯಿಂದ ನಡೆಯಿತು.
ಮಹಾ ಶಿವರಾತ್ರಿ ಆರಾಧನೆ ಅಂಗವಾಗಿ ದೇವಾಲಯದಲ್ಲಿ ಬೆಳಗ್ಗಿನಿಂದಲೇ ವಿವಿಧ ಪೂಜಾ ವಿಧಿ ವಿಧಾನಗಳು ಜರುಗಿದವು. ಮೇಕೇರಿಯ ಶಕ್ತಿನಗರ, ಕಾವೇರಿ ಬಡಾವಣೆ, ಸುಭಾಶ್ ನಗರ ಮತ್ತು ಮೇಕೇರಿ ಬಿಳಿಗೇರಿ ಜಂಕ್ಷನ್‌ನಿಂದ ಚಂಡೆ ವಾದ್ಯ ಸಹಿತ ಮೆರವಣಿಗೆಯಲ್ಲಿ ಬಂದ ಭಕ್ತಾದಿಗಳು ಹೊರೆ ಕಾಣಿಕೆ ಸಮರ್ಪಿಸಿದರು.
ಮಹಾ ಮೃತ್ಯುಂಜಯ ಹೋಮ, ರುದ್ರಾಭಿಷೇಕ, ಮಹಾಪೂಜೆ ನೆರವೇರಿತು. ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಭಕ್ತರು ಶ್ರೀ ಗೌರಿಶಂಕರನ ಕೃಪೆಗೆ ಪಾತ್ರರಾದರು. ನೆರೆದಿದ್ದ ಭಕ್ತಾಧಿಗಳಿಗೆ ಮಧ್ಯಾಹ್ನ ಅನ್ನ ಸಂತರ್ಪಣೆ ನೆರವೇರಿತು.
ಸಂಜೆ ವಿವಿಧ ಪೂಜೆಯೊಂದಿಗೆ ರುದ್ರಾಭಿಷೇಕ, ರಾತ್ರಿ ರಂಗಪೂಜೆ, ಪ್ರಸಾದ ವಿತರಣೆ ನಡೆಯಿತು. ಶಿವರಾತ್ರಿ ಜಾಗರಣೆ ಹಿನ್ನೆಲೆ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ “ಯಕ್ಷಗಾನ ನಾಟ್ಯ ವೈಭವ” ಎಂಬ ವಿನೂತನ ಪ್ರದರ್ಶನ ನೆರೆದಿದ್ದವರ ಗಮನ ಸೆಳೆಯಿತು.
ಫೆ.19 ರಂದು ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ವಿವಿಧ ದೇವತಾರಾಧನೆಯೊಂದಿಗೆ ಮಹಾಪೂಜೆ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ.











