ಮಡಿಕೇರಿ ಫೆ.19 : ಜಿಲ್ಲೆಯ ಪ್ರಮುಖ ಪ್ರವಾಸಿತಾಣ ಅಬ್ಬಿಫಾಲ್ಸ್ ಗೆ ಆಗಮಿಸುವ ಪ್ರವಾಸಿಗರಿಂದ ಪ್ರವೇಶ ಶುಲ್ಕ ವಸೂಲಾತಿ ಮಾಡಬಾರದೆಂದು ಜಾಗದ ಮಾಲೀಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅಬ್ಬಿಫಾಲ್ಸ್ ಇರುವ ಪ್ರದೇಶ ನೆರವಂಡ ಪಾರ್ವತಿ ನಾಣಯ್ಯ ಎಂಬುವವರ ಖಾಸಗಿ ಆಸ್ತಿಯಾಗಿದ್ದು ಇದು ಪ್ರವಾಸಿತಾಣವಾಗಿ ರೂಪುಗೊಂಡ ಸಂದರ್ಭ ಫಾಲ್ಸ್ ಗೆ ತೆರಳುವ ಪಾದಚಾರಿ ಮಾರ್ಗವನ್ನು ಮಾತ್ರವೇ ಜಿಲ್ಲಾಡಳಿತಕ್ಕೆ ಬಿಟ್ಟು ಕೊಟ್ಟಿದ್ದರು. ಈ ವೇಳೆ ಅಬ್ಬಿಫಾಲ್ಸ್ ಸೌಂದರ್ಯ ಸವಿಯಲು ಆಗಮಿಸುವ ಪ್ರವಾಸಿಗರಿಂದ ಯಾವುದೇ ರೀತಿಯ ಹಣ ಪಡೆಯಬಾರದು ಎಂಬ ಒಪ್ಪಂದ ಮಾಡಿಕೊಳ್ಳಲಾಗಿತ್ತು ಎನ್ನಲಾಗಿದೆ. ಆದರೆ ಕಳೆದ ಕೆಲವು ದಿನಗಳಿಂದ ಅಬ್ಬಿಫಾಲ್ಸ್ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರಿಂದ ಪ್ರವೇಶ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಇದಕ್ಕೆ ಜಾಗದ ಮಾಲೀಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೇ ಈ ಮೊದಲೇ ಜಿಲ್ಲಾಡಳಿತಕ್ಕೆ ಪತ್ರದ ಮೂಲಕ ದೂರು ನೀಡಿದ್ದ ಮಾಲೀಕರು ಅನಧಿಕೃತ ಶುಲ್ಕ ವಸೂಲಿಯನ್ನು ನಿಲ್ಲಿಸಬೇಕೆಂದು ಮನವಿ ಮಾಡಿದ್ದರು.
ಇಂದು ಸ್ಥಳಕ್ಕೆ ಭೇಟಿ ನೀಡಿದ್ದ ಮಾಲೀಕರ ಪುತ್ರಿಯರು ಅನುಮತಿಯನ್ನು ಪಡೆಯದೆ ಶುಲ್ಕ ಸಂಗ್ರಹದ ಕೌಂಟರ್ ತೆರೆಯಲಾಗಿದೆ ಎಂದು ಶುಲ್ಕ ವಸೂಲಿ ಸಿಬ್ಬಂದಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಅಬ್ಬಿಫಾಲ್ಸ್ಗೆ ತೆರಳುವ ಪ್ರವಾಸಿಗರಿಂದ ಯಾವುದೇ ಪ್ರವೇಶ ಶುಲ್ಕ ಪಡೆಯಬಾರದು. ತಕ್ಷಣ ಕೌಂಟರ್‌ಗೆ ಬೀಗ ಹಾಕುವಂತೆ ಸೂಚಿಸಿ ಟಿಕೆಟ್ ಕೌಂಟರ್ ಅನ್ನು ಬಂದ್ ಮಾಡಿಸಿದರು. ಈ ಸಂದರ್ಭ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಹಾಗೂ ಸಿಬ್ಬಂದಿಗಳು ಹಾಜರಿದ್ದರು.












