ನಾಪೋಕ್ಲು ಫೆ.20 : ಗ್ರಾಮೀಣ ಪ್ರದೇಶಗಳಲ್ಲಿ ಎಲ್ಲಾ ಜನಾಂಗದವರನ್ನು ಒಗ್ಗೂಗೂಡಿಸಿ ಕ್ರೀಡೆಗಳನ್ನು ಆಯೋಜಿಸುವುದರಿಂದ ಸಾಮರಸ್ಯದೊಂದಿಗೆ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್.ಪೊನ್ನಣ್ಣ ಹೇಳಿದರು.
ಸ್ಥಳೀಯ ಕರ್ನಾಟಕ ಪಬ್ಲಿಕ್ ಪ್ರಾಥಮಿಕ ಶಾಲಾ ಮೈದಾನದಲ್ಲಿ ಹಳೇ ತಾಲ್ಲೂಕುವಿನ ಅಲ್ ಅಮೀನ್ ಕ್ರಿಕೆಟರ್ಸ್ ವತಿಯಿಂದ ಆಯೋಜಿಸಲಾದ 4ನೇ ವರ್ಷದ ಹಳೇ ತಾಲ್ಲೂಕು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
ಕ್ರೀಡೆಯಲ್ಲಿ ಜಾತಿ, ಧರ್ಮ, ಬಡವ ಶ್ರೀಮಂತ ಎನ್ನುವ ಬೇಧ ಭಾವ ಕಾಣಲು ಸಾಧ್ಯವಿಲ್ಲ. ಜಿಲ್ಲೆಯಲ್ಲಿ ವಿವಿಧ ಸಂಸ್ಥೆಗಳು ಹಲವಾರು ರೀತಿಯ ಕ್ರೀಡಾಕೂಟಗಳನ್ನು ಆಯೋಜಿಸುತ್ತಿದೆ. ಅದಕ್ಕೆ ನಾವೆಲ್ಲರೂ ಎಲ್ಲಾ ರೀತಿಯಲ್ಲಿ ಸಹಕಾರ ಪ್ರೋತ್ಸಾಹ ನೀಡಬೇಕು. ಆಗ ಮಾತ್ರ ಕ್ರೀಡಾಪಟುಗಳು ಭವಿಷ್ಯದಲ್ಲಿ ಮುಂದೆ ಬರಲು ಸಾಧ್ಯ ಎಂದರು.
ಕ್ರೀಡೆಗೆ ಪ್ರಸಿದ್ಧವಾದ ಕೊಡಗು ಜಿಲ್ಲೆಯಿಂದ ಕ್ರೀಡಾಪಟುಗಳು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ರಾಜ್ಯ,ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುತ್ತಿದ್ದಾರೆ. ಆದರೂ ನಮ್ಮ ಜಿಲ್ಲೆಯಲ್ಲಿ ಉತ್ತಮ ಕ್ರೀಡಾಂಗಣ, ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಮೈದಾನಗಳ ಕೊರತೆಯನ್ನು ಎದುರಿಸುತ್ತಿದ್ದಾರೆ.ಇದರಿಂದ ಕ್ರೀಡಾಪಟುಗಳು ಗದ್ದೆಗಳಲ್ಲಿ ಸಣ್ಣ ಪುಟ್ಟ ಮೈದಾನಗಳಲ್ಲಿ ಕ್ರೀಡೆಗಳನ್ನು ಆಯೋಜಿಸುವಂತ್ತಾಗಿದೆ ಎಂದರು.
ಈಗಾಗಲೇ ಜಿಲ್ಲಾಧ್ಯಂತ ಮುಂದಿನ ಚುನಾವಣೆಯಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ನಿಮ್ಮೆಲ್ಲರ ಸಹಕಾರ ಇದ್ದರೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಂತೆ ವಿರಾಜಪೇಟೆ ಕ್ಷೇತ್ರದಲ್ಲಿ ಉತ್ತಮ ಕ್ರೀಡಾಂಗಣ ಮತ್ತು ಗ್ರಾಮೀಣ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಳೊಂದಿಗೆ ಉತ್ತಮ ಮೈದಾನಗಳನ್ನು ನಿರ್ಮಿಸಿ ಕೊಡುವುದಾಗಿ ಪೊನ್ನಣ್ಣ ಭರವಸೆ ನೀಡಿದರು.
ಇದೇ ರೀತಿಯಲ್ಲಿ ಕ್ರೀಡೆಗಳನ್ನು ಆಯೋಜಿಸಿ ಗ್ರಾಮೀಣಮಟ್ಟದ ಕ್ರೀಡಾಪಟುಗಳು ರಾಜ್ಯ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುವಂತಾಗಲಿ ಎಂದು ಶುಭ ಕೋರಿದರು.
ನಾಪೋಕ್ಲು ಗ್ರಾ.ಪಂ ಸದಸ್ಯ ಕುಲ್ಲೇಟಿರ ಅರುಣ್ ಬೇಬ ಪ್ರಾಸ್ತಾವಿಕವಾಗಿ ಮಾತನಾಡಿ, ಹಳೇ ತಾಲೂಕು ಒಂದು ಪುಟ್ಟ ಗ್ರಾಮವಾಗಿದ್ದು, ಇಲ್ಲಿ ಎಲ್ಲರೂ ಸಾಮರಸ್ಯದಿಂದ ಜೀವನ ನಡೆಸುತ್ತಿದ್ದಾರೆ. ಪೊನ್ನಣ್ಣ ನವರು ಮುಂದಿನ ಚುನಾವಣೆಯಲ್ಲಿ ವಿರಾಜಪೇಟೆ ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆಯಾದಲ್ಲಿ ನಾವು ಎಲ್ಲಾ ರೀತಿಯಲ್ಲಿ ಸಹಕಾರ ನೀಡಲಿದ್ದೇವೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜಾ ಉತ್ತಪ್ಪ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎ. ಹಂಸ, ನಾಪೋಕ್ಲು ಗ್ರಾ.ಪಂ ಉಪಾಧ್ಯಕ್ಷ ಟಿ.ಎ.ಮಹಮ್ಮದ್, ಸದಸ್ಯ ಕುಲ್ಲೇಟಿರ ಅರುಣ್ ಬೇಬ, ಪ್ರಮುಖರಾದ ಬೋಳ್ಳಂಡ ಶರಿ, ಜೆಡಿಎಸ್ ಪ್ರಮುಖರಾದ ಎಂ.ಎಸ್. ಇಬ್ರಾಹಿಂ, ಹಂಸ, ಟಿ.ಎ.ಇಬ್ರಾಹಿಂ,ಪಂದ್ಯಾವಳಿಯ ಆಯೋಜಕರಾದ ನವಾಜ್, ಮಹಮ್ಮದ್ ಅಲಿ, ಆಸಿಫ್, ಕಮರುದ್ದೀನ್, ರಿಜ್ವಾನ್, ಮುನೀರ್ ಹಾಗೂ ಅಲ್ ಅಮೀನ್ ಕ್ರಿಕೆಟರ್ಸ್ ನ ಪದಾಧಿಕಾರಿಗಳು ಮತ್ತಿತರ ಪ್ರಮುಖರು ಹಾಜರಿದ್ದರು.
ವರದಿ :ಝಕರಿಯ ನಾಪೋಕ್ಲು