ಮಡಿಕೇರಿ ಫೆ.20 : ತಮ್ಮ ಮಾತೃ ಭಾಷೆಯನ್ನು ಮರೆತರೆ ಅದು ತಮ್ಮ ತಾಯಿಯನ್ನೇ ಮರೆತಂತೆ ಎಂದು ಕೊಡಗಿನ ಖ್ಯಾತ ಲೇಖಕಿ ಹಾಗೂ ಕಾವೇರಿ ಕಾಲೇಜಿನ ಉಪನ್ಯಾಸಕಿ ಡಾ. ರೇವತಿ ಪೂವಯ್ಯ ಅಭಿಪ್ರಾಯಪಟ್ಟರು.
ಚೆಟ್ಟಳ್ಳಿ ಪ್ರೌಢಶಾಲಾ ಮೈದಾನದಲ್ಲಿ ತಮಿಳು ಯುವ ಒಕ್ಕೂಟದ ವತಿಯಿಂದ ಆಯೋಜಿಸಲಾಗಿದ್ದ, ಸಮುದಾಯ ಬಾಂಧವರ ಜಿಲ್ಲಾ ಮಟ್ಟದ ಕ್ರೀಡಾಕೂಟ ಹಾಗು ಸಾಂಸ್ಕೃತಿಕ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಬಹು ಸಂಸ್ಕೃತಿಯ ಈ ನಾಡಿನಲ್ಲಿ ಆಯಾ ಸಂಸ್ಕೃತಿ ಉಳಿಯಲು ಮಾತೃಭಾಷೆಯೇ ಮೂಲ. ಮಾತೃಭಾಷೆ ಹೃದಯದ ಭಾಷೆ, ಮಾತೆ ಹಾಲೂಡುತ್ತಾ ಮಾತನಾಡಿದ ಭಾಷೆ, ಹುಟ್ಟಿದ ತಕ್ಷಣ ಕಿವಿಯ ಮೇಲೆ ಬಿದ್ದ ಭಾಷೆ, ಹೀಗಾಗಿ ಅದರೊಂದಿಗಿನ ಬಂಧ ತಾಯಿಯಷ್ಟೇ ಆಪ್ತ. ‘ಭಾವಕ್ಕೆ ಭಾಷೆಯ ಬಂಧನವಿಲ್ಲ ಆದರೆ ಭಾವನೆಗಳು ಸಮರ್ಥವಾಗಿ ವ್ಯಕ್ತವಾಗುವುದು ಮಾತ್ರಭಾಷೆಯಲ್ಲೇ. ನಾವು ಬೆಳೆದಂತೆ ಹಲವು ಭಾಷೆಗಳನ್ನು ಕರಗತಗೊಳಿಸಿ ಕೊಳ್ಳುತ್ತೇವೆ. ವ್ಯವಹಾರಕ್ಕಾಗಿ ಯಾವದೋ ಭಾಷೆ ಬಳಸುತ್ತೇವೆ. ಆದರೆ ಮಾತೃಭಾಷೆ ಎಂಬುದು ನಮ್ಮ ಆಂತರ್ಯದ ಭಾಷೆ. ಹೀಗಾಗಿ ಅದರ ಮೇಲೆ ಪ್ರೀತಿ ಶಾಶ್ವತ.
ಭಾಷಾ ಸೌಹಾರ್ದ ಎಂದು ಕರ್ನಾಟಕದಲ್ಲಿ ಆಚರಣೆ ಮಾಡಲಾತಿದೆ . ಕರ್ನಾಟಕದಲ್ಲಿ ತಿರುವಳ್ಳುವರ್ ಪ್ರತಿಮೆಯನ್ನು, ತಮಿಳುನಾಡಿನಲ್ಲಿ ಸರ್ವಜ್ಞನ ಪ್ರತಿಮೆಯನ್ನು ಸ್ಥಾಪನೆ ಮಾಡಿರುವುದನ್ನು ನಾವು ಗಮನಿಸಬಹುದೆಂದರು. ತಮಿಳುನಾಡಿನಲ್ಲಿ ತಿರುವಲ್ಲುವರ್ ಅವರನ್ನು ಸಂತ ಕವಿ, ಶ್ರೇಷ್ಠ ಕವಿ ಎಂದು ಕರೆಯಲಾಗುತ್ತದೆ. ತಿರುವಳ್ಳುವರ್ ಅವರ ಕಾವ್ಯವನ್ನು ಸಾಧ್ಯವಾದಷ್ಟು ಕೊಡವ ಭಾಷೆಗೆ ತರ್ಜುಮೆ ಮಾಡಿದ್ದೇನೆ.
ಇಂತಹ ಕೃತಿಯನ್ನು ಅನುವಾದ ಮಾಡುವುದರಲ್ಲಿ ನನಗೆ ತುಂಬ ಸಂತೋಷವಾಯಿತು.ವಿಶ್ವದಲ್ಲಿ ಶಾಸ್ತ್ರೀಯ ಸ್ಥಾನ ಮಾನ ಸಿಕ್ಕಿರುವ ಭಾಷೆ ತಮಿಳು, ಶಾಸ್ತ್ರೀಯ ಸ್ಥಾನಮಾನ ಪಡೆಯುವ ಭಾಷೆ ಸುಮಾರು 2000 ಸಾವಿರ ವರ್ಷಗಳ ಹಳೆಯದಾಗಿರಬೇಕು.
ತಿರುಕುರಲ್ ಜಗತ್ತಿನ ಹೆಚ್ಚು ಭಾಷೆಗಳಿಗೆ ತರ್ಜುಮೆ ಮಾಡಲಾಗಿದ್ದು, ಎರಡನೇ ಸ್ಥಾನದಲ್ಲಿದೆ.
ತಮಿಳು, ಕನ್ನಡ, ಮಲಯಾಳಂ, ಕೊಡವ ಭಾಷೆ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಷೆಗಳು ದ್ರಾವಿಡ ಭಾಷೆಗಳೇ. ದ್ರಾವಿಡ ಎಂದರೇ ಅದು ತಮಿಳು ಎಂಬ ಅರ್ಥವಿದೆ. ಪ್ರತಿಯೊಬ್ಬರು ತಮ್ಮ ಮಾತೃಭಾಷೆಯ ಮೂಲಕ ಬೇರೆ ಭಾಷೆಯನ್ನು ನೋಡಬೇಕು. ಇಂದಿನ ಮಕ್ಕಳು ಹಿರಿಯರಿಂದ ಭಾಷೆಯ ಬಗ್ಗೆ ತಿಳಿದುಕೊಳ್ಳಬೇಕು ಎಂದರು.
ಮತ್ತೋರ್ವ ಅತಿಥಿ ಮುಧೋಶ್ ಪೂವಯ್ಯ ಮಾತನಾಡಿ ತಮಿಳುನಾಡಿನಲ್ಲಿ ಕೊಡಗಿನವರನ್ನು ಕೂಡ ತಮಿಳು ಮಕ್ಕಳ್ ಎಂದು ಕರೆಯುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಭೆಯ ಅಧ್ಯಕ್ಷೆ ವಹಿಸಿದ್ದ ಒಕ್ಕೂಟದ ಅಧ್ಯಕ್ಷ ರವಿ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಸಮುದಾಯ ಬಾಂಧವರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಸಂಘಟನೆ ವಿವಿಧ ಬಗೆಯ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬಂದಿದೆ. ಮುಂದೆ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜಾಗೃತಿ ಮೂಡಿಸಲು ಪ್ರಯತ್ನಿಸಲಿದ್ದೇವೆ ಎಂದರು.
ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್ ಮಾತನಾಡಿ, ಒಕ್ಕೂಟದ ವತಿಯಿಂದ ಸಮುದಾಯದ ಯುವ ಜನತೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿವರ್ಷ ಶೈಕ್ಷಣಿಕ ಕ್ಷೇತ್ರ, ಕ್ರೀಡಾ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಿ ಗೌರವಿಸಲಾಗುತ್ತಿದ್ದು, ಮತ್ತಷ್ಟು ಸಾಧನೆ ಮಾಡಲು ಉತ್ತೇಜನ ನೀಡಲಾಗುತ್ತಿದೆ ಎಂದರು.
ಪ್ರಮುಖರಾದ ಸುರೇಶ್ ಬಿಳಿಗೇರಿ ಮಾತನಾಡಿ, ಸಮುದಾಯ ಬಾಂಧವರ ಒಗ್ಗೂಡುವಿಕೆಗೆ ಯುವ ಒಕ್ಕೂಟ ಉತ್ತಮ ವೇದಿಕೆ ಕಲ್ಪಿಸಿದೆ. ಯುವ ಜನತೆಯನ್ನು ಉತ್ತೇಜಿಸುವ ಕೆಲಸವನ್ನು ಸಂಘಟನೆ ಸದಾ ಮಾಡುತ್ತಿದ್ದು, ಜಿಲ್ಲೆಯಲ್ಲಿರುವ ತಮಿಳು ಬಾಂಧವರು ಮತ್ತಷ್ಟು ಬೆಂಬಲ ನೀಡುವ ಮುಖಾಂತರ ಒಕ್ಕೂಟಕ್ಕೆ ಶಕ್ತಿ ತುಂಬಬೇಕಾಗಿದೆ ಎಂದರು.
ಇದೇ ಸಂದರ್ಭ ವಿಶ್ವ ವಿಖ್ಯಾತ ತಿರುಕ್ಕುರಳ್ ಅನ್ನು ಕೊಡವ ಭಾಷೆಗೆ ಭಾಷಾಂತರ ಮಾಡಿರುವ ಮಲ್ಲೆಂಗಡ ರೇವತಿ ಪೂವಯ್ಯ, ಸೇರಿದಂತೆ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಇನಿಯ, ಅಮೃತ, ಶಿವಕಾಮಿ, ಶಕ್ತಿಪ್ರಿಯ, ದೀಪ್ತಿ, ಸಂದೀಪ್, ಅನುತ, ಪವಿತ್ರ, ಗುಣಶೇಖರ್, ಸರಿತಾ, ಸಂಧ್ಯಾ, ನಂದಿನಿ ಹಾಗೂ ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಗಾಗಿ ನಿತಿನ್ ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ನಂತರ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಪುರುಷರಿಗೆ ನಡೆದ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಅಡ್ಮಿನ್ ಬಳಗ ಪ್ರಥಮ ಸ್ಥಾನ ಹಾಗೂ ಎಂವೈಸಿಸಿ ಹೊಳಮಾಲ ದ್ವಿತೀಯ ಸ್ಥಾನವನ್ನು ಪಡೆಯಿತು.
ಮಹಿಳೆಯ ವಿಭಾಗದಲ್ಲಿ ಜಾನಕಿ ಆ್ಯಂಡ್ ಟೀಂ ಪ್ರಥಮ ಹಾಗೂ ಮಂಜುಳಾ ಪ್ರಕಾಶ್ ಆ್ಯಂಡ್ ಟೀಂ ಪಡೆಯಿತು.
ಕಾರ್ಯಕ್ರಮವನ್ನು ವಿಘ್ನೇಶ್ ಭೂತಾನಕಾಡು ನಿರೂಪಿಸಿದರೆ, ಅರುಣ್ ಕುಮಾರ್ ಸ್ವಾಗತಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ಯುವ ಒಕ್ಕೂಟದ ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮಿ, ಉಪಾಧ್ಯಕ್ಷೆ ಶಾಂತಿ, ಕಾರ್ಯಕ್ರಮದ ಸಂಚಾಲಕ ಶಶಿ ಕುಮಾರ್, ಪ್ರಕಾಶ್, ಮಣಿಕಂಠ ಸೆಲ್ವಂ, ಹರೀಶ್, ಸುಧಾಕರ್, ಸುಕುಮಾರ್ ಸೇರಿದಂತೆ ಮತ್ತಿತರರು ಇದ್ದರು.










