ವಿರಾಜಪೇಟೆ ಫೆ,21 : ಅಮ್ಮತ್ತಿ ಕಾರ್ಮಾಡು ಗ್ರಾಮದ ಶ್ರೀ ಚಾಮುಂಡೇಶ್ವರಿ ಹಾಗೂ ಶ್ರೀ ಪಾಷಾಣಮೂರ್ತಿ ಕ್ಷೇತ್ರದ ವಾರ್ಷಿಕೋತ್ಸವದ ಅಂಗವಾಗಿ ಪಂಜುರ್ಲಿ ದೈವದ ಪ್ರತಿಷ್ಠಾಪನಾ ಕಾರ್ಯ ಶ್ರದ್ಧಾಭಕ್ತಿಯಿಂದ ಜರುಗಿತು.
ಅಮ್ಮತ್ತಿಯ ಗುರುರಾಜ್ ಭಟ್ ನೇತೃತ್ವದಲ್ಲಿ ದೇವಾಲಯದಲ್ಲಿ ಗಣಪತಿ ಹೋಮ, ಶ್ರೀ ಪಂಜುರ್ಲಿ ದೈವದ ಪ್ರತಿಷ್ಠಾಪನೆ ಹಾಗೂ ಪ್ರತಿಷ್ಠಾಪನೆ ಹೋಮ, ಕಲಶ ಪೂಜೆ ಮಹಾಪೂಜೆ, ಶ್ರೀ ಸತ್ಯನಾರಾಯಣ ಸ್ವಾಮಿಯ ಪೂಜೆ, ಅಲಂಕಾರ ಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಿತು.
ಸಂಜೆ ದೀಪಾರಾಧನೆ ನಂತರ ದೇವರ ಭಂಡಾರವನ್ನು ವಾದ್ಯಗೋಷ್ಠಿಯೊಂದಿಗೆ ತೆಗೆಯಲಾಯಿತು. ಬಳಿಕ ಧಾರ್ಮಿಕ ಪ್ರವಚನವು ನಡೆಯಿತು.
ಅಮ್ಮತ್ತಿಯ ಉದ್ದಪಂಡ ಕರುಣ್ ಕುಟ್ಟಪ್ಪ ಪ್ರವಚನದ ಕುರಿತು ಮಾತನಾಡಿದರು.
ರಾತ್ರಿ ಪರಿವಾರ ದೈವಗಳಾದ ಶ್ರೀ ಪಾಷಾಣಮೂರ್ತಿ, ಪಂಜುರ್ಲಿ, ಗುಳಿಗ ದೈವಗಳ ನೇಮೋತ್ಸವವು ಬೆಳಗ್ಗಿನವರೆಗೆ ನಡೆಯಿತು.
ಶ್ರೀ ಚಾಮುಂಡೇಶ್ವರಿ ಮತ್ತು ಪಾಷಾಣಮೂರ್ತಿ ಕ್ಷೇತ್ರದ ವಾರ್ಷಿಕೋತ್ಸವದ ಅಂಗವಾಗಿ ದೇವಾಲಯ ಹಾಗೂ ಅದರ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ದೀಪಗಳಿಂದ ಹಾಗೂ ಹೂವುಗಳಿಂದ ಅಲಂಕೃತಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಸಮೃದ್ಧಿ ಎ.ವಿ ಪ್ರಾರ್ಥಿಸಿದರು. ಹರ್ಷಿತಾ ಲೋಕೇಶ್ ಸ್ವಾಗತಿಸಿ, ಗುರುರಾಜ್ ಭಟ್ ವಂದಿಸಿದರು. ಈ ಸಂದರ್ಭದಲ್ಲಿ ಶ್ರೀ ಚಾಮುಂಡೇಶ್ವರಿ ಪಾಷಾಣಮೂರ್ತಿ ಕ್ಷೇತ್ರದ ಪ್ರಮುಖರಾದ ಕುಟ್ಟಂಡ ಸರಸ್ವತಿ ಹಾಗೂ ಲೋಕೇಶ್ ಮುತ್ತಪ್ಪ ಸೇರಿದಂತೆ ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಜರಿದ್ದರು.









