ಮಡಿಕೇರಿ ಫೆ.22 : ರಾಜ್ಯ ರಾಜಕೀಯಕ್ಕೆ ಮಹತ್ತರವಾದ ಮತ್ತೊಂದು ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿರುವ ಈ ಹಂತದಲ್ಲಿ, ಕೊಡಗು ಜಿಲ್ಲಾ ಕಾಂಗ್ರೆಸ್ ವಿರಾಜಪೇಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಸಂಘಟಿಸುವ ಮೂಲಕ ತನ್ನ ಬಲ ಪ್ರದರ್ಶನ ನಡೆಸಿದೆ.
ನಗರದ ಸೆರಿನಿಟಿ ಸಭಾಂಗಣದಲ್ಲಿ ಆಯೋಜಿತ ಕಾಂಗ್ರೆಸ್ ಕಾರ್ಯಕರ್ತರ ಜನಸ್ಪಂದನ ಸಭೆಯಲ್ಲಿ ಸಹಸ್ರಾರು ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಳ್ಳುವ ಮೂಲಕ ಮುಂದಿನ ಚುನಾವಣೆಯನ್ನು ಎದುರಿಸಲು ನಾಯಕರುಗಳಿಗೆ ಶಕ್ತಿ ತುಂಬಿದರು. ಇದೇ ಹಂತದಲ್ಲಿ ಜಿಲ್ಲಾ ಜೆಡಿಎಸ್‍ನ ಮಾಜಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಮೇರಿಯಂಡ ಸಂಕೇತ್ ಪೂವಯ್ಯ ಅವರು, ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಮೂಲಕ ಮುಂಬರುವ ಚುನಾವಣೆ ಮತ್ತಷ್ಟು ರಂಗೇರುವುದನ್ನು ಖಚಿತಪಡಿಸಿದರು.
ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡಿದ್ದ ಕೇರಳದ ಶಾಸಕ ರೋಸಿ ಜಾನ್ ಮಾತನಾಡಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ನ್ನು ಜನತೆ ಆಶೀರ್ವದಿಸಿ ಅಧಿಕಾರಕ್ಕೆ ತಂದಲ್ಲಿ ಮಹಿಳೆಯರಿಗೆ ಮಾಸಿಕ 2 ಸಾವಿರ ರೂ. ಗೌರವ ಧನವನ್ನು ನೀಡಲಾಗುತ್ತದೆ. ವಿರಾಜಪೇಟೆ, ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಎಲ್ಲಾ ನಿವಾಸಿಗಳಿಗೆ ಉಚಿತ ವಿದ್ಯುತ್ ಕಾರ್ಡ್ ನೀಡಲಿದೆಯೆಂದು ಭರವಸೆಯನನ್ನಿತ್ತರು.
ಕೊಡಗಿನಲ್ಲಿ ಆರೋಗ್ಯ ಸೌಲಭ್ಯಗಳು ಸಮರ್ಪಕವಾಗಿ ದೊರಕುತ್ತಿಲ್ಲ. ಸ್ಥಳೀಯರ ಬೇಡಿಕೆಯ ‘ಮಲ್ಟಿ ಸ್ಪೆμÁಲಿಟಿ ಆಸ್ಪತ್ರೆ’ ಮರೀಚಿಕೆಯಾಗಿದೆ ಎಂದು ಹೇಳಿದ ಅವರು, ಈ ಬಾರಿ ಚುನಾವಣೆಯಲ್ಲಿ ಮತದಾರರು ಬಿಜೆಪಿಯನ್ನು ತಿರಸ್ಕರಿಸಲಿದ್ದಾರೆಂದು ದೃಢವಾಗಿ ನುಡಿದರು.
ಕಾಂಗ್ರೆಸ್ ಮುಖಂಡರು ಹಾಗೂ ಪಕ್ಷದ ವೀಕ್ಷಕರಾದ ವಿನಯ್ ಕುಮಾರ್ ಸೊರಕೆ ಮಾತನಾಡಿ, ಮುಂಬರಲಿರುವ ವಿಧಾನ ಸಭಾ ಚುನಾವಣೆಯನ್ನು ಟಿಪ್ಪು ಮತ್ತು ಸಾವರ್ಕರ್ ನಡುವಿನ ಚುನಾವಣೆಯೆಂದು ಬಿಜೆಪಿ ಜನರ ಹಾದಿ ತಪ್ಪಿಸುವ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಟೀಕಿಸಿದರು.
ಪ್ರಸ್ತುತ ಬಿಜೆಪಿ ಆಡಳಿತಾವಧಿಯಲ್ಲಿ ನಿತ್ಯೋಪಯೋಗಿ ವಸ್ತುಗಳ ಬೆಲೆ ಗಗನ ಮುಖಿಯಾಗಿದೆ. ಅಡುಗೆ ಅನಿಲ ಬೆಲೆ ಏರಿಕೆಯಾಗಿದ್ದು, ಜನಸಾಮಾನ್ಯರು ಪರಿತಪಿಸುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಅಡುಗೆ ಅನಿಲಕ್ಕೆ ಸಹಾಯಧನವಿತ್ತು, ಇದರಿಂದ ಶ್ರೀಸಾಮಾನ್ಯನಿಗೆ ಕಡಿಮೆ ಬೆಲೆಗೆ ಅಡುಗೆ ಅನಿಲ ದೊರಕುತಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ವಾರ್ಷಿಕ ರೈತರ ಖಾತೆಗೆ 50 ಸಾವಿರ ರೂ. ಬರಲಿದೆಯೆಂದು ಭರವಸೆ ನೀಡಿದ ಅವರು, ಬಿಜೆಪಿ ಸರ್ಕಾರ ಕೇವಲ ರೈತರ ಕಣ್ಣೊರೆಸುವ ನಾಟಕ ಆಡುತ್ತಿದೆಯೆಂದು ಲೇವಡಿ ಮಾಡಿದರು.
ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಮೇರಿಯಂಡ ಸಂಕೇತ್ ಪೂವಯ್ಯ ಮಾತನಾಡಿ, ಜೆಡಿಎಸ್‍ನಲ್ಲಿದ್ದಾಗ ತಾನು, ಚುನಾವಣೆಯಲ್ಲಿ ಸೋಲುವುದು ಗೊತ್ತಿದ್ದರೂ ಸ್ಪರ್ಧಿಸಿದ್ದೆ ಎಂದು ತಿಳಿಸಿದರು.
ಬಿಜೆಪಿಯ ಡಬ್ಬಲ್ ಇಂಜಿನ್ ವಾಹನದಲ್ಲಿ ಡೀಸೆಲ್ ಇಲ್ಲ. ನಾಲ್ಕು ಟೈರ್ ಪಂಕ್ಚರ್ ಆಗಿದೆ. ಈ ಬಾರಿ ಕೊಡಗಿನಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಕೊಡಗಿನ ಬಿಜೆಪಿ ಶಾಸಕರಿಗೆ ಸಚಿವ ಸ್ಥಾನಮಾನ ನೀಡದೆ ಡಬ್ಬಲ್ ಇಂಜಿನ್ ಸರ್ಕಾರ ಜಿಲ್ಲೆಗೆ ಅನ್ಯಾಯವೆಸಗಿದೆ. ಕಾಫಿ ಬೆಳೆಗಾರರು, ವರ್ತಕರು, ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಕೇಂದ್ರ ವಾಣಿಜ್ಯ ಸಚಿವಾಲಯ ಕಾಫಿ ಬೆಳೆಗಾರರನ್ನು ಕಡೆಗಣಿಸಿದೆ ಎಂದು ಆರೋಪಿಸಿದರು.
ಈ ಬಾರಿ ಕೊಡಗಿನಲ್ಲಿ ಬದಲಾವಣೆಯ ಹೊಸ ಶಖೆ ಆರಂಭವಾಗಲಿದೆ. ಜನಾನುರಾಗಿ ಎ.ಎಸ್.ಪೊನ್ನಣ್ಣ ಅವರು ಜಯಭೇರಿ ಭಾರಿಸಲಿದ್ದಾರೆ ಎಂದರು.
ಕಾಂಗ್ರೆಸ್ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್, ಕೊಡಗು ಕಾಂಗ್ರೆಸ್ ಉಸ್ತುವಾರಿ ಲಕ್ಷ್ಮಣ್, ಪ್ರಮುಖರಾದ ಹೆಚ್.ಎಸ್.ಚಂದ್ರಮೌಳಿ, ಡಾ.ಮಂಥರ್ ಗೌಡ ಮಾಜಿ ಎಂಎಲ್‍ಸಿಗಳಾದ ಶಾಂತೆಯಂಡ ವೀಣಾ ಅಚ್ಚಯ್ಯ, ಸಿ.ಎಸ್.ಅರುಣ್ ಮಾಚಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಕೆಪಿಸಿಸಿಯ ಕಾರ್ಯದರ್ಶಿ ಕೆ.ಪಿ.ಚಂದ್ರಕಲಾ ಪ್ರಸನ್ನ, ಪಕ್ಷದ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್, ಪಿ.ಸಿ.ಹಸೈನಾರ್, ಮೀದೇರಿರ ನವೀನ್, ನಾಪೋಕ್ಲುವಿನ ಇಸ್ಮಾಯಿಲ್, ವೀರಾಜಪೇಟೆ ಬ್ಲಾಕ್ ಅಧ್ಯಕ್ಷ ರಂಜಿ ಪೂಣಚ್ಚ, ನೆರವಂಡ ಉಮೇಶ್, ಕೆ.ಬಿ.ಶಾಂತಪ್ಪ, ಸುರಯ್ಯಾ ಅಬ್ರಾರ್, ಬಾನಂಡ ಪ್ರಥ್ಯು, ಪೆಮ್ಮಂಡ ಪೊನ್ನಪ್ಪ, ತಾರಾ ಅಯ್ಯಮ್ಮ, ಕೊರಕುಟ್ಟೀರ ಸರ ಚಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.
ಜನಸ್ಪಂದನ ಕಾರ್ಯಕ್ರಮದ ಹಿನ್ನೆಲೆ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಬೈಕ್ ರ‍್ಯಾಲಿ ನಡೆಸಿದರು.










